ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸಲಿದೆ : ಸುಧಾಕರ್.

77
firstsuddi

ಬೆಂಗಳೂರು : ಆ್ಯಸಿಡ್ ದಾಳಿಗೆ ಒಳಗಾಗಿರುವ ಸಂತ್ರಸ್ತ ಯುವತಿ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂತ್ರಸ್ತೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವೈಯಕ್ತಿಕವಾಗಿ ನಾನು 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ. ಸಂತ್ರಸ್ತ ಯುವತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಯುವತಿ ದೇಹ ಶೇ.35ರಷ್ಟು ಸುಟ್ಟು ಹೋಗಿದ್ದು, ಪರಿಸ್ಥಿತಿ ಸ್ವಲ್ಪ ಕ್ಲಿಷ್ಟವಾಗಿದೆ. ಆದರೂ ವೈದ್ಯರು ಭರವಸೆ ನೀಡಿದ್ದಾರೆ . ಆಕೆ ಸಂಪೂರ್ಣ ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಯುವತಿಯ ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಆಕೆಗೆ ಸರ್ಕಾರಿ ಉದ್ಯೋಗ ಕೊಡುವಂತಹದ್ದು ಆಗಬೇಕು. ಆ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

21ನೇ ಶತಮಾನದ ನಾಗರಿಕ ಸಮಾಜದಲ್ಲಿ ಈ ರೀತಿಯ ಹೃದಯ ಕಲಕುವಂತಹ ಘಟನೆ ನಡೆದಿರುವುದು ತಲೆ ತಗ್ಗಿಸುವ ವಿಚಾರ. ಇದು ರಾಕ್ಷಸಿ ಮನೋಭಾವ, ಯುವತಿಗೆ ಬಿಎಂಸಿಯಿಂದ ಚರ್ಮ ಕಸಿ ಮಾಡಲು ಹೇಳಿದ್ದೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆರೋಪಿಯನ್ನು ಶೀಘ್ರವೇ ಬಂಧಿಸಿ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರ ಜೊತೆ ಚರ್ಚಿಸಿ ವಿಶೇಷವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಮಾಡಿ ತ್ವರಿತವಾಗಿ ಆರೋಪಿಗೆ ಶಿಕ್ಷೆಯಾಗುವಂತೆ ಒತ್ತಾಯಿಸುತ್ತೇನೆ, ಇಂತಹ ಕ್ರೌರ್ಯಕ್ಕೆ ತಕ್ಕ ಶಾಸ್ತಿಯಾಗಿ ಸಮಾಜಕ್ಕೆ, ಜನರಿಗೆ ಇದೊಂದು ಪಾಠವಾಗಬೇಕು ಎಂದರು.

ಇನ್ನೂ ಸಂತ್ರಸ್ತೆ ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 1 ಲಕ್ಷ ರೂ. ಸಹಾಯಹಸ್ತದ ಚೆಕ್ ಅನ್ನು ವಿಶೇಷ ಆಯುಕ್ತರಾದ ರಂಗಪ್ಪ ಮತ್ತು ಬಿಬಿಎಂಪಿ ನೌಕರರ ಭವನದ ಅಧ್ಯಕ್ಷರಾದ ಅಮೃತ್ ರಾಜ್ ಕುಟುಂಬಸ್ಥರಿಗೆ ಕೊಟ್ಟರು.