ಉಡುಪಿ : ಇಂದಿನಿಂದ ಮೇ 19 ರವರೆಗೂ ಮದ್ಯ ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ.
ಕೆಎಸ್‍ಪಿಸಿಎಲ್‍ನಿಂದ ಮ್ಯಾನುವಲ್ ಮೆತಡ್ ಮೂಲಕ ಇಷ್ಟು ವರ್ಷ ವೈನ್ ಮರ್ಚೆಂಟ್ಸ್, ಬಾರ್ ಮಾಲೀಕರು ಖರೀದಿ ಮಾಡುತ್ತಿದ್ದರು. ಈಗ ವೆಬ್ ಸೈಟ್ ಓಪನ್ ಮಾಡಿ, ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕು. ರಾತ್ರಿ 9 ರಿಂದ ಬೆಳಗ್ಗೆ ಒಂಬತ್ತರವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಆತಂಕ ಸೃಷ್ಟಿಸಿದೆ.
ಕೆಎಸ್‍ಪಿಸಿಎಲ್ ಹೊಸ ನೀತಿಯಿಂದ ಮದ್ಯ ಮಾರಾಟಗಾರರಿಗೆ ಸಮಸ್ಯೆ ಎದುರಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಗಂಭೀರ ಆರೋಪ ಮಾಡಿದೆ. ಈ ಸಮಸ್ಯೆ ಬಗ್ಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲು ಕೆಎಸ್‍ಪಿಸಿಎಲ್ ಎಂಡಿ ತಯಾರಿಲ್ಲ. ಈ ಬಗ್ಗೆ ಸಭೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿರುವ ಆಯುಕ್ತರು ಒಂದು ತಿಂಗಳು ಕಳೆದರೂ ಇನ್ನೂ ಆಗಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಮುಷ್ಕರ ಎಲ್ಲೆಲ್ಲಿ ಯಾವಾಗ? : ಮೇ 6 ರಂದು ಅಂದ್ರೆ ಇಂದು ಕಲುಬುರಗಿ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಮೇ 10 ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಮೇ 12 ರಂದು ಮೈಸೂರು ವಿಭಾಗದ ಜಿಲ್ಲೆಗಳಾದ, ಮೈಸೂರ, ಚಿಕ್ಕಮಗಳೂರು, ಹಾಸನ, ಮಂಡ್ಯ ಹಾಗೂ ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಮೇ 17 ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮೇ 19 ರಂದು ಬೆಂಗಳೂರು ನಗರ ವಿಭಾಗದ ಕೆಎಸ್ ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡುವುದಿಲ್ಲ ಎಂದು ಬಾರ್ ಮಾಲೀಕರ ಸಂಘ ತಿಳಿಸಿದೆ.










