ಬೆಂಗಳೂರು : ನಗರದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ ನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ರೂಪಾಯಿ ಬಹುಮಾನ ಧನ ನೀಡೋದಾಗಿ ಕಮಲ್ ಪಂತ್ ಅವರು ಹೇಳಿದ್ದಾರೆ.
ಇಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಒಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಕಳೆದ 15 ದಿನಗಳಿಂದ ಸುಮಾರು ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಲ್ಲದೇ 50 ಮಂದಿ ಪೊಲೀಸ್ ಅಧಿಕಾರಿಗಳು ಎಲ್ಲೆಡೆ ಓಡಾಡುವ ಮೂಲಕ ಹಾಗೂ ತನಿಖೆಯ ಸಂಪೂರ್ಣ ಹುಡುಕಾಟವನ್ನು ಮಾಡಲು ಸತತವಾಗಿ ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ 5 ಲಕ್ಷ ರೂ.ಗಳನ್ನೂ ಅಭಿನಂದನೆಯ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಏಪ್ರಿಲ್ 28ರಂದು ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮದಲ್ಲಿ ಶುಕ್ರವಾರ ಸಂಜೆ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಆರೋಪಿಯ ಮೇಲೆ ಎಂಟು ದಿನಗಳ ಒಳಗೆ ಚಾರ್ಜ್ಶೀಟ್ ಹಾಕಲಾಗುವುದು. ಆದಷ್ಟು ಬೇಗ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು.
ನಾಗೇಶ್ ಆ್ಯಸಿಡ್ ದಾಳಿ ನಡೆಸಿ ತಕ್ಷಣ ಅವನ ಸ್ನೇಹಿತ ಹಾಗೂ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವರು ಪೊಲೀಸರಿಗೆ ಶರಣಾಗುವಂತೆ ತಿಳಿಸಿದ್ದಾರೆ. ಅದನ್ನು ಅಲ್ಲಗಳೆದು ನೇರವಾಗಿ ನ್ಯಾಯಾಲಯಕ್ಕೆ ಹೋಗಿ ಕೆಲ ವಕೀಲರನ್ನು ಸಂಪರ್ಕಿಸಿದ್ದಾನೆ. ಆದರೆ, ಅವರು ಪೊಲೀಸರಿಗೆ ವಿಷಯ ತಿಳಿಸುವಂತೆ ಹೇಳಿದಾಗ, ಅಲ್ಲಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದರೆ, ಆ ಯೋಜನೆ ಕೈಬಿಟ್ಟು ಅಲ್ಲಿಂದ ನೇರವಾಗಿ ತಿರುವಣ್ಣಾಮಲೈ ಆಶ್ರಮಕ್ಕೆ ಹೋಗಿ ಕಾವಿ ಬಟ್ಟೆ ತೊಟ್ಟು ಸ್ವಾಮೀಜಿ ಅಂತಾ ಪೂಜೆ ಹಾಗೂ ಧ್ಯಾನದಲ್ಲಿ ಮಗ್ನನಾಗಿದ್ದ. ಆರೋಪಿ ಸೆರೆಗೆ ಎಲ್ಲಾ ಕಡೆಗಳಲ್ಲಿ ಅವನ ಚಿತ್ರಗಳನ್ನು ಅಂಟಿಸಲಾಗಿತ್ತು. ಅದರಂತೆಯೇ ತಿರುವಣ್ಣಾಮಲೈ ಆಶ್ರಮದಲ್ಲಿ ಇದ್ದ ಕಾರಣ ಅದನ್ನು ಗಮನಿಸಿದ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಹಾಗೂ ಚಿತ್ರದ ಆಧಾರದಲ್ಲಿ ತಕ್ಷಣ ಸಮೀಪದಲ್ಲಿಯೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಅವನನ್ನು ಆರೋಪಿ ನಾಗೇಶ್ ಎಂದು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಆರೋಪಿ ನಾಗೇಶ್ 2020ರಲ್ಲಿ ಒಂದು ಬಾರಿ ಈ ರೀತಿಯ ಆ್ಯಸಿಡ್ ದಾಳಿ ನಡೆಸಲು ಯೋಚಿಸಿದ್ದು, ಕಾರಣಾಂತರಗಳಿಂದ ಅದನ್ನು ಕೈಬಿಟ್ಟಿದ್ದ. ಆದರೆ, ಈ ಬಾರಿ ಪೂರ್ವ ನಿಯೋಜಿಸಿಕೊಂಡಂತೆ, ಮೂರು ತಿಂಗಳ ಹಿಂದೆ ಊರಿನಲ್ಲಿದ್ದ ಜಮೀನನ್ನು ಮಾರಿ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ತೆರೆದಿದ್ದ. ಆದರೆ, ಏಪ್ರಿಲ್ 15ರಂದು ಆ ಕಾರ್ಖಾನೆಯ ಮಿಷಿನ್ ಗಳನ್ನು ಮಾರಾಟ ಮಾಡಿ ಹಣ ಪಡೆದಿದ್ದ. ಅದರೊಂದಿಗೆ ಒಂದು ಪ್ರಿಂಟ್ ಮಾಡುವ ಕಂಪನಿಗೆ ಸೇರಿಕೊಂಡಿದ್ದು, ಅದರ ಲೆಟರ್ ಹೆಡ್ ಅಡಿಯಲ್ಲಿ ಸೆಲ್ಫರಿಕ್ ಆ್ಯಸಿಡ್ ಅನ್ನು ಖರೀದಿಸಿದ್ದ. ನಂತರ ಏಪ್ರಿಲ್ 28ರಂದು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾನೆ ಎಂದು ಕಮಲ್ ಪಂತ್ ವಿವರಿಸಿದರು.










