ಚಿಕ್ಕಮಗಳೂರು : ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ 290ನೇ ವಾರ್ಷಿಕ ಜಾತ್ರೆ.

65
firstsuddi

ಚಿಕ್ಕಮಗಳೂರು : ನಗರದ ದೋಣಿಖಣದ ಐದು ಗ್ರಾಮಗಳ ಶಕ್ತಿ ದೇವತೆ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ 290ನೇ ವಾರ್ಷಿಕ ಜಾತ್ರೆ ಮತ್ತು ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ನಿನ್ನೆ ರಾತ್ರಿ ವೈಭವದಿಂದ ನಡೆಯಿತು.

ಉತ್ಸವದ ಪ್ರಯುಕ್ತ ಕಳೆದ ಒಂದು ವಾರದಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು, ಶ್ರೀ ಕೊಲ್ಲಾಪುರದಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ದೋಣಿಖಣ, ಕೋಟೆ, ಮೂರುಮನೆ ಹಳ್ಳಿ, ಹೊಸಮನೆ, ಶಂಕರಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜರುಗಿತು.

ಮಂಡಲ ಪೂಜೆ ಪ್ರಯುಕ್ತ ದೇವಾಲಯದಲ್ಲಿ ಗಣಹೋಮ, ದುರ್ಗಾಶಕ್ತಿ ಹೋಮ ನಡೆದವು, ಗುರುವಾರ ರಾತ್ರಿ ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಗಂಗಾ ಪೂಜೆ ನೆರವೇರಿಸಿ ಶ್ರೀ ಕೊಲ್ಲಾಪುರದಮ್ಮನವರ ಉತ್ಸವ ಮೂರ್ತಿಯನ್ನು ಕಳಸ ಮತ್ತು ದೇವಿ ಗಣಗಳೊಂದಿಗೆ ಗ್ರಾಮೀಣ ವಾದ್ಯಗಳ ನಡುವೆ ದೇವಾಲಯಕ್ಕೆ ಕರೆತರಲಾಯಿತು.

ಸಿಡಿ ಪ್ರಯುಕ್ತ ನಿನ್ನೆ ಬೆಳಿಗ್ಗೆ ದೇವಾಲಯದಲ್ಲಿ ಅಭಿಷೇಕ, ಅಲಂಕಾರ, ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳ ರೈತರು ಮಧ್ಯಾಹ್ನದ ನಂತರ ಪಾನಕ ಬಂಡಿಗಳಲ್ಲಿ ಆಗಮಿಸಿ ದೇವಿಗೆ ನೈವೇದ್ಯ ಸಮರ್ಪಿಸಿದರು.

ಇದೇ ವೇಳೆ ನಡೆದ ಜೋಡೆತ್ತಿನ ಗಾಡಿಗಳ ಓಟ ನೋಡುಗರ ಮೈನವಿರೇಳಿಸಿತು, ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಹುರಿದುಂಬಿಸಿದರು, ಸಂಜೆ ಕೊಲ್ಲಾಪುರದಮ್ಮ, ದುರ್ಗಮ್ಮ, ಚಿಕ್ಕಮ್ಮ, ಉಗ್ರಾಣದಮ್ಮ ಮತ್ತು ಗುಂಡಿನಮ್ಮ ದೇವರ ಗಣಗಳು, ಕೋಟೆ ದೋಣಿಖಣದ ಮನೆ ಮನೆಗೆ ತೆರಳಿ ಪೂಜೆ ಸ್ವೀಕರಿಸಿ ಹರಸಿ ದೇವಾಲಯಕ್ಕೆ ಆಗಮಿಸಿದ ನಂತರ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಪೂಜೆ ಸಲ್ಲಿಸಲಾಯಿತು.

ನಂತರ ದೇವಿ ಗಣಗಳನ್ನು ಸಿಡಿಗಂಬಕ್ಕೇರಿಸಿ ರಾಟೆ ತಿರುಗಿಸಲಾಯಿತು, ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬಕ್ಕೇರಿಸಿ ಹರಕೆ ಸಲ್ಲಿಸಿದರು, ನೆರೆದಿದ್ದ ಭಕ್ತರು ಸಿಡಿಗಂಬದತ್ತ ಬಾಳೆಹಣ್ಣನ್ನು ತೂರಿ ಸಂಭ್ರಮಿಸಿದರು.

ದೋಣಿಖಣ, ಕೋಟೆ, ಮೂರುಮನೆ ಹಳ್ಳಿ, ಹೊಸಮನೆ ಮತ್ತು ಶಂಕರಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.