ಶ್ರೀನಿವಾಸ್ ಗೌಡನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ : ಹೆಚ್‌ಡಿಕೆ ಕಿಡಿ…

65
firstsuddi

ಬೆಂಗಳೂರು : ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋಲಾರ ಜನತೆಯ ಜೆಡಿಎಸ್ ಮತದಾರರಿಗೆ ಅವರು ಅವಮಾನ ಮಾಡಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಅಡಿ ಗೆದ್ದು, ಅವರಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ನವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. 2016ರಲ್ಲಿ 8 ಶಾಸಕರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದರು. ಇದೀಗ ಶ್ರೀನಿವಾಸ್ ಗೌಡ ಅವರ ಕೈಯಲ್ಲಿ ಅಡ್ಡ ಮತ ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಶ್ರೀನಿವಾಸ್ ಗೌಡರ ವೋಟ್ ಹಾಕಿಸಿಕೊಂಡಿರಿ ನಿಮಗೆ ಏನು ಸಿಗ್ತು. ನಿಮ್ಮ ಅಭ್ಯರ್ಥಿ ಗೆದ್ದರೆ ಕ್ರಾಸ್ ವೋಟ್ ಮಾಡಿಸಿದ್ದಕ್ಕೆ ಸಾರ್ಥಕ ಆಯ್ತು ಎನ್ನಬಹುದು. ಆದರೆ, ಇಲ್ಲಿ ಬಿಜೆಪಿ ಗೆಲ್ಲಿಸೋದಕ್ಕೆ ಹೀಗೆ ಮಾಡಿದಿರಿ. ಗುಬ್ಬಿ ಶ್ರೀನಿವಾಸ್ ಜೆಡಿಎಸ್ ಗೆ ಮತ ಹಾಕುತ್ತೇನೆ ಅಂದ್ರು. ಆದರೆ, ಮತಪತ್ರದಲ್ಲಿ ಏನು ಮಾಡಿದರು?.. ಅವರು ಯಾರಿಗೂ ಮತ ಹಾಕಿಲ್ಲ. ಆದರೆ ಜನರ ಮುಂದೆ ಸುಳ್ಳು ಹೇಳಿದ್ದಾರೆ. ಇಂಥ ಕೀಳು ಮಟ್ಟದ ರಾಜಕಾರಣ ಮಾಡಬಾರದು. ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಅದಕ್ಕೆ ನೀವು ಕಾರಣ. ಕಾಂಗ್ರೆಸ್ ನ ಬಣ್ಣ ಬಯಲಾಗಿದೆ. ನನ್ನ ಜೊತೆ ಅನುಕಂಪ ಇದ್ದ ಕೆಲವು ಕೈ ಶಾಸಕರ ಜೊತೆ ಮಾತನಾಡಿದ್ದೇನೆ. ಎರಡನೇ ಪ್ರಾಶಸ್ತ್ಯ ನಮಗೆ ಹಾಕಿ ಎಂದು ಮನವಿ ಮಾಡಿದ್ದೇನೆ ಎಂದರು.