ಬೆಂಗಳೂರು : ಭವಿಷ್ಯದಲ್ಲಿ ಏನೋ ಆಗುತ್ತೆ ಅಂತ ಇವತ್ತು ಬೆಂಕಿ ಹಚ್ಚುವ ಕೆಲಸ ಆಗಬಾರದು. ಈ ದೇಶದಲ್ಲಿ ಏನು ಆಗಲು ಬಿಡಬಾರದು ಎನ್ನುವ ಒಂದು ವರ್ಗ ಇದೆ. ಆ ವರ್ಗ ವಿರೋಧ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಿಡಿಕಾರಿದರು.
ಅಗ್ನಿಪಥ್ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅಗ್ನಿಪಥ್ ಯೋಜನೆ ವಿರೋಧಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಯೋಜನೆ ಇನ್ನೂ ಜಾರಿಯಾಗಿಲ್ಲ. ಆಗಲೇ ವಿರೋಧ ಮಾಡಿದರೆ ಹೇಗೆ. ಇದೊಂದು ಉತ್ತಮ ಯೋಜನೆ. ಇಸ್ರೇಲ್ ದೇಶದಲ್ಲಿ ಕಡ್ಡಾಯವಾಗಿ ಸೇನೆ ತರಬೇತಿ ಇರಬೇಕು ಅಂತ ಇದೆ. ಈ ಯೋಜನೆಯಲ್ಲಿ 4 ವರ್ಷ ಟ್ರೈನಿಂಗ್ ಕೊಡುವುದಕ್ಕೆ ಸರ್ಕಾರ ಚಿಂತನೆ ಮಾಡಿದೆ. ಆದಾದ ಬಳಿಕ ಅನೇಕ ಉದ್ಯೋಗಕ್ಕೆ ಯೋಜನೆ ಅನುಕೂಲ ಆಗಲಿದೆ ಎಂದರು.
ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ? ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂದರು.










