ನವದೆಹಲಿ : ನೀವು ಯಶಸ್ಸುಗಳೊಂದಿಗೆ ಹಿಂದಿರುಗುತ್ತೀರಿ ಎಂದು ನನಗೆ ವಿಶ್ವಾಸವಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ದೆಹಲಿಯ ನಿವಾಸದಲ್ಲಿ ಔತಣಕೂಟ ಆಯೋಜಿಸಿದರು. ಔತಣಕೂಟದಲ್ಲಿ ಕಾಮನ್ ವೆಲ್ತ್ ನಲ್ಲಿ ಪಾಲ್ಗೊಂಡಿದ್ದ ಎಲ್ಲ ಕ್ರೀಡಾಪಟುಗಳು ಭಾಗಿಯಾಗಿದ್ದರು. ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ನೀವೆಲ್ಲರೂ ನಿಮ್ಮ ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನನ್ನನ್ನು ನನ್ನ ನಿವಾಸದಲ್ಲಿ ಭೇಟಿಯಾಗಲು ಬಂದಿರುವುದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇನ್ನೆರಡು ದಿನಗಳಲ್ಲಿ ನಮ್ಮ ದೇಶವು ಸ್ವಾತಂತ್ರ್ಯಗೊಂಡ 75 ವರ್ಷ ಪೂರೈಸಲಿದೆ. ನಿಮ್ಮೆಲ್ಲರ ಪರಿಶ್ರಮದಿಂದ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಕಳೆದ ಕೆಲವು ವಾರಗಳಲ್ಲಿ, ರಾಷ್ಟ್ರವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ದಾಖಲಿಸಿದ್ದು, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿರುವುದರ ಜೊತೆಗೆ ದೇಶ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಚೆಸ್ ಒಲಿಂಪಿಯಾಡ್ ನಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಾಳುಗಳಿಗೂ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.










