ಬೆಳಗಾವಿ : ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಗಂಡನ ಕೊಲೆ ಮಾಡಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನಡೆದಿದೆ.
ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಲಕ್ಷ್ಮೀ ತನ್ನ ಪ್ರಿಯಕರ ರಮೇಶ ಬಡಿಗೇರ ಜೊತೆ ಸೇರಿ ಪತಿ ಪಾಂಡಪ್ಪನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾಳೆ. ಬಳಿಕ ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಶವವನ್ನು ಬೈಕ್ ನಲ್ಲಿ ಹೊತ್ತೊಯ್ದು ಹೊಸೂರು ಕಿರುಸೇತುವೆ ಬಳಿ ಎಸೆದು ಬಂದಿದ್ದರು.
ಲಕ್ಷ್ಮಿ ತನಗೆ ಏನೂ ಗೊತ್ತೆ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಗಂಡ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ರಮೇಶ್ ಬಡಿಗೇರ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಗೊತ್ತಾಗಿದೆ. ನಂತರ ಪೊಲೀಸರು ರಮೇಶ್ ಮತ್ತು ಲಕ್ಷ್ಮೀಯನ್ನು ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ನಡೆದು 24 ಗಂಟೆಯೊಳಗೆ ಕಟಕೋಳ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.










