ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ, 63 ಲಕ್ಷ ರೂ. ದಂಡ…

88
firstsuddi

ಬೆಳಗಾವಿ : ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 63 ಲಕ್ಷ ರೂ. ದಂಡವನ್ನು ವಿಧಿಸಿ ಬೆಳಗಾವಿಯ ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಪಿ. ಶಾಂತಕುಮಾರ್ ಶಿಕ್ಷೆಗೆ ಒಳಗಾದವರು. ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್ ನವರಾದ ಶಾಂತಕುಮಾರ್ ಪ್ರಸ್ತುತ ಬೆಳಗಾವಿ ನಗರದ ಆಂಜನೇಯ ನಗರದಲ್ಲಿ ವಾಸವಾಗಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು 2010ರ ಮೇ 3 ರಂದು ಪ್ರಕರಣ ದಾಖಲಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಶಾಂತಕುಮಾರ್ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ 1.14 ಕೋಟಿ ಆಸ್ತಿ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿದ್ದ ಆರ್.ಬಿ. ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಂತಕುಮಾರ್ ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸದಿದ್ರೆ ಆರೋಪಿ ಅಥವಾ ಪತ್ನಿಯ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದ್ದಾರೆ.