ಬೆಂಗಳೂರು : ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕರಾಗಿ ಡಾ.ಎಂ.ಶ್ರೀನಿವಾಸ್ ಅವರು ನೇಮಕವಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ(ಎಸಿಸಿ)ಯು ಪ್ರಸ್ತುತ ಹೈದರಾಬಾದ್ ನ ಇಎಸ್ ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಆಗಿರುವ ಶ್ರೀನಿವಾಸ್ ಅವರನ್ನು ದೆಹಲಿಯ ಏಮ್ಸ್ ನೂತನ ನಿರ್ದೇಶಕರಾಗಿ ಐದು ವರ್ಷದ ಅವಧಿಗೆ ನೇಮಿಸಿದೆ.
ಡಾ. ಎಂ.ಶ್ರೀನಿವಾಸ್ ಕನ್ನಡಿಗರಾಗಿದ್ದು ಯಾದಗಿರಿ ಮೂಲದವರಾಗಿದ್ದಾರೆ. ನಿವೃತ್ತ ತಹಶೀಲ್ದಾರ್ ಆಶಪ್ಪ ಅವರ ಹಿರಿಯ ಪುತ್ರರಾಗಿದ್ದು, ಸ್ಟೇಷನ್ ಬಜಾರ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯೂ ಕನ್ನಡ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ಬಳ್ಳಾರಿಯ ಏಮ್ಸ್ ನಲ್ಲಿ 1984ರ ಬ್ಯಾಚ್ ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಡಾ.ಶ್ರೀನಿವಾಸ್ ಇದಕ್ಕೂ ಮೊದಲು ದೆಹಲಿಯ ಏಮ್ಸ್ ನಲ್ಲಿಯೇ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ಆಗಿದ್ದರು.
ಏಮ್ಸ್ ಮುಖ್ಯಸ್ಥರಾಗಿದ್ದ ಡಾ.ರಂದೀಪ್ ಗುಲೇರಿಯಾ ಅವರ ಅವಧಿ ಸೆಪ್ಟೆಂಬರ್ 23ರಂದು ಮುಗಿದಿದ್ದು, ಇದೀಗ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾಗಿ ಕನ್ನಡಿಗ ಡಾ. ಶ್ರೀನಿವಾಸ್ ಅವರು ನೇಮಕಗೊಂಡಿದ್ದಾರೆ.










