ಯುವ ಪೀಳಿಗೆ ಜಾನಪದ ಕಲೆ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು : ವಸಂತಕುಮಾರ್.

101
firstsuddi

ಚಿಕ್ಕಮಗಳೂರು : ಇಂದಿನ ಯುವ ಪೀಳಿಗೆ ಆಧುನಿಕತೆಯಅಬ್ಬರದಿಂದ ಹೊರಬಂದು ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತರೀಕೆರೆ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ವಸಂತಕುಮಾರ್ ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ತರೀಕೆರೆ ತಾಲ್ಲೂಕಿನ ತ್ಯಾಗದ ಬಾಗಿಯಲ್ಲಿ ನಿನ್ನೆ ಆಯೋಜಿಸಿದ್ದ ಜಾನಪದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಅದು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ. ಜಾನಪದದಿಂದಾಗಿ ಭಾರತೀಯ ಸಂಸ್ಕೃತಿ ಜಗತ್ತಿನ ಮನ್ನಣೆ ಪಡೆದಿದೆ ಎಂದರು.

ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿರುವ ಇಂದಿನ ಯುವ ಪೀಳಿಗೆ ಚಲನಚಿತ್ರಗಳ ಕೀಳು ಸಾಹಿತ್ಯವುಳ್ಳ ಹಾಡುಗಳಿಗೆ ಆಧುನಿಕತೆಗೆ ಮನಸೋತ್ತಿದ್ದರಿಂದಾಗಿ ಜಾನಪದ ಇಂದು ಕಣ್ಮರೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಮುಂದಿನ ತಲೆಮಾರಿಗೆ ಅದು ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನಪದ ಕಲೆಗಳ ತರಬೇತಿ ಕಾರ್ಯಕ್ರಮವನ್ನು ಪರಿಷತ್ತಿನಿಂದ ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಾನಪದವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಜಾನಪದ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಲಾಗುವುದು ಎಂದು ಹೇಳಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಡ್ಲೂರು ರೇವಣ್ಣ ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಡ್ಲೂರು ರೇವಣ್ಣ ಸಿದ್ದಪ್ಪ ಜಾನಪದದಿಂದ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ತರೀಕೆರೆ ತಾಲ್ಲೂಕು ಅಧ್ಯಕ್ಷ ನಾಗೇಶ್ ಮತ್ತು ಅವರ ತಂಡ ಶಿಬಿರಾರ್ಥಿಗಳಿಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಕುರಿತು ತರಬೇತಿ ನೀಡಿತು.

ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಗೌರವಾಧ್ಯಕ್ಷ ಪಿ.ದೇವರಾಜ್, ಮುಖಂಡರಾದ ಗಿರೀಶ್, ಜಿ.ಟಿ.ಕುಮಾರಸ್ವಾಮಿ, ನಾಗೇನಹಳ್ಳಿ ತಿಮ್ಮಯ್ಯ, ಕೆ.ಆರ್.ಶಿವಕುಮಾರ್, ಎಸ್.ಬಿ.ರಮೇಶ್, ಬಸವರಾಜಯ್ಯ, ನಾಗೇಂದ್ರಪ್ಪ ಉಪಸ್ಥಿತರಿದ್ದರು.