ಮೈಸೂರು : ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ ಅಳವಡಿಕೆ…

60
firstsuddi

ಮೈಸೂರು : ನಗರದ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಈ ಬಸ್ ನಿಲ್ದಾಣಕ್ಕೆ ರಾತ್ರೋ ರಾತ್ರಿ ಜೆಎಸ್ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿದೆ. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿದ್ದು, ಮತ್ತೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಫೋಟೋವನ್ನು ಹಾಕಲಾಗಿದೆ.

ಬಸ್ ನಿಲ್ದಾಣ ತೆರವಿಗೆ ಸಂಸದ ಪ್ರತಾಪ್ ಸಿಂಹ ಕೊಟ್ಟ ಗಡುವು ಇವತ್ತು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಈ ಬದಲಾವಣೆ ನಡೆದಿದೆ.

ಮತ್ತೊಂದೆಡೆ ಅನಧಿಕೃತವಾಗಿ ಕಟ್ಟಿರುವ ಬಸ್ ನಿಲ್ದಾಣದ ಶೆಲ್ಟರ್ ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೋಟಿಸ್ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಲ ಭಾಗದಲ್ಲಿ ಬಸ್​ ಶೆಲ್ಟರ್ ನಿರ್ಮಿಸಲಾಗಿದೆ. ಈ ಹಿಂದೆ ಅನೇಕ ಬಾರಿ ಬಸ್ ಶೆಲ್ಟರ್ ನಿರ್ಮಿಸದಂತೆ ಸೂಚಿಸಲಾಗಿತ್ತು. ಆದರೂ ಅನಧಿಕೃತವಾಗಿ ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ವಿಚಾರ ಕೋಮು ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. 1 ವಾರದೊಳಗೆ ವಿವಾದಾತ್ಮಕ ಬಸ್ ನಿಲ್ದಾಣ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯ್ದೆಯಡಿ 2003ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಲಾಗಿದೆ.