ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧ ಹಲಸೂರು ಗೇಟ್ ಪೊಲೀಸರು ಮಲ್ಲೇಶ್ವರಂ ಚಿಲುಮೆ ಸಂಸ್ಥೆಯ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸೇರಿದ ರೇಣುಕಾಪ್ರಸಾದ್, ಧರ್ಮೇಶ್, ಸುಧಾಕರ್ ಮತ್ತು ರಕ್ಷಿತ್ ಎನ್ನುವರನ್ನು ವಶಕ್ಕೆ ಪಡೆದುಕೊಂಡಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ. ಇನ್ನು ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ್ದ ಮಹದೇವಪುರ ವಲಯದ ಆರ್ ಒ ಚಂದ್ರಶೇಖರ್ ರನ್ನು ಸಸ್ಪೆಂಡ್ ಮಾಡಲಾಗಿದೆ.
ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರು ಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಬಿಬಿಎಂಪಿ ದೂರು ನೀಡಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಚಿಲುಮೆ ಕಚೇರಿ ಮೇಲೆ ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಆಯೋಗ ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಹೇಳಿತ್ತು. ಅದರಂತೆ ಇದೀಗ ಬಿಬಿಎಂಪಿ ಚುನಾವಣೆ ಆಯೋಗಕ್ಕೆ ವರದಿ ನೀಡಿದೆ.
ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಹೊಣೆ ನೀಡಲಾಗಿತ್ತು. ಉಚಿತವಾಗಿ ಜೋಡಣೆ ಮಾಡುವುದಾಗಿ ಚಿಲುಮೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಗೆ ವೋಟರ್ ಐಡಿ ಹಾಗೂ ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂದು ಚುನಾವಣೆ ಆಯೋಗಕ್ಕೆ ಬಿಬಿಎಂಪಿ ನೀಡಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.










