ಚಿಕ್ಕಮಗಳೂರು : ಕಾರ್ಮಿಕ ವರ್ಗ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕ ಒಕ್ಕೂಟದ ಜಿಲ್ಲಾಧ್ಯಕ್ಷ ಜಯರಾಂ ಸಜಿತ್ ಸಲಹೆ ನೀಡಿದರು.
ಆಲ್ದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಮಿಕ ಇಲಾಖೆಯ ಶ್ರಮಿಕ ಸಂಜೀವಿನಿ ಕಾರ್ಯಕ್ರಮದಡಿ ಒಕ್ಕೂಟ ಇಂದು ಏರ್ಪಡಿಸಿದ್ದ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣದಂತಹ ಶ್ರಮದ ಕೆಲಸಗಳನ್ನು ಮಾಡಬೇಕಾದರೆ ಕಾರ್ಮಿಕರ ಆರೋಗ್ಯ ಸಧೃಡವಾಗಿರಬೇಕು, ಶರೀರ ಶಕ್ತಿಯುತವಾಗಬೇಕಾದರೆ ನಾವು ದುಶ್ಚಟಗಳಿಂದ ದೂರವಿರಬೇಕು ಹಾಗಾದಾಗ ಮಾತ್ರ ಆರ್ಥಿಕವಾಗಿ ಬಲಿಷ್ಠರಾಗಲು ಮತ್ತು ಕಾರ್ಮಿಕರ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉದಯಕುಮಾರ್ ಮಾತನಾಡಿ ಕಾರ್ಮಿಕರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಶ್ರಮಿಕ ಸಂಜೀವಿನಿ ಕಾರ್ಯಕ್ರಮದ ಸಂಯೋಜಕ ಉಮೇಶ್ ಮಾತನಾಡಿ ಕಾರ್ಮಿಕರು ಇಲಾಖೆಯಿಂದ ನಡೆಸಲಾಗುವ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಇಲಾಖೆ ಶ್ರಮಿಕ ಸಂಜೀವಿನಿ ವೈದ್ಯಾಧಿಕಾರಿ ಡಾ|| ಅನಿತ್ ಕುಮಾರ್ ನೇತೃತ್ವದ ತಂಡ ಶಿಬಿರದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿತು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಮಂಜಪ್ಪ ಉಪಸ್ಥಿತರಿದ್ದರು.










