ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಮೋದಿ.

49
firstsuddi

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಾದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.

ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ತಾಂಡಾ ಮತ್ತು ಹಟ್ಟಿಗಳಲ್ಲಿ ವಾಸವಾಗಿರುವ 51 ಸಾವಿರ ಕುಟುಂಬಸ್ಥರಿಗೆ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಿದರು. ನಗಾರಿ ಬಾರಿಸಿದ ಮೋದಿ ಸಾಂಕೇತಿಕವಾಗಿ 5 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದರು.

ಲಂಬಾಣಿ ಭಾಷೆಯಲ್ಲಿ ಮಾತು ಆರಂಭಿಸಿದ ಮೋದಿ ಬಳಿಕ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಹಿಂದಿನ ಸರ್ಕಾರ ಬಂಜಾರ ಸಮುದಾಯವನ್ನು ನಿರ್ಲಕ್ಷ್ಯಿಸಿತ್ತು. ಆದರೆ ನಮ್ಮ ಸರ್ಕಾರ ಅವರಿಗೆ ಹಕ್ಕು ಪತ್ರ ನೀಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಡಬಲ್ ಎಂಜಿನ್ ಸರ್ಕಾರ ಜನರ ಕಲ್ಯಾಣಕ್ಕೆ ಸಹಾಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿದ್ದವು. ಆದರೆ ಬಿಜೆಪಿ ಸರ್ಕಾರವು ಹಕ್ಕು ಪತ್ರಗಳನ್ನು ನೀಡಿ ಅವರಿಗೆ ಒಂದು ಹಕ್ಕು ನೀಡಿದೆ. ನಮ್ಮ ದೇಶಕ್ಕೆ ಸಂವಿಧಾನ ರಚನೆಯಾದ ತಿಂಗಳಿನಲ್ಲಿ ಈ ಹಕ್ಕು ಕೊಟ್ಟಿರುವುದಕ್ಕೆ ನನಗೆ ಬಹಳ ಸಂತಸ ತಂದಿದೆ ಎಂದರು.

ಬಂಜಾರ ಸಮುದಾಯ ನನಗೆ ಹೊಸದಲ್ಲ. ನಮ್ಮ ಬಂಜಾರ ಸಮುದಾಯದ ಸಹೋದರ ಸಹೋದರಿಯರು ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರವು ದೇಶಾದ್ಯಂತ ಹಳ್ಳಿಗಳಲ್ಲಿರುವ ಗ್ರಾಮೀಣ ಮನೆಗಳಿಗೆ ಹಕ್ಕು ಪತ್ರ ನೀಡುತ್ತಿದೆ. ಈಗ ಬಂಜಾರ ಸಮುದಾಯವೂ ಈ ಸೌಲಭ್ಯವನ್ನು ಪಡೆಯುತ್ತಿದೆ ಎಂದು ತಿಳಿಸಿದರು.

ಆಸ್ತಿ ಇಲ್ಲದವರಿಗೆ ಯಾರು ಗ್ಯಾರಂಟಿ ಕೊಡುತ್ತಾರೆ? ನಮ್ಮ ಸರ್ಕಾರ ಮುದ್ರಾ ಯೋಜನೆ ಮೂಲಕ ಅವರಿಗೆ ಗ್ಯಾರೆಂಟಿ ನೀಡಿದೆ. ಕರ್ನಾಟಕ ಸರ್ಕಾರದ ಈ ನಿರ್ಧಾರ ಬಹಳ ಸಂತೋಷ ತಂದಿದೆ. ಯಾವ ಸರ್ಕಾರ ಮಾಡದ ಕೆಲಸವನ್ನು ಸರ್ಕಾರ ಮಾಡಿದೆ. ಹಕ್ಕು ಪತ್ರ ಪಡೆದ ಮಹಿಳೆ ನನಗೆ ಆಶೀರ್ವಾದ ಮಾಡಿದರು. ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಕೆಲಸ ಮಾಡಲಾಗುವುದು ಎಂದು ಹೇಳಿದರು.