ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ವಿ.ಬಾಲಕೃಷ್ಣ ಅವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.
ವಿ.ಬಾಲಕೃಷ್ಣ ಯಲಚೇನಹಳ್ಳಿ ವಾರ್ಡ್ ನಂ.185ರ ಮಾಜಿ ಕಾರ್ಪೊರೇಟರ್ ಆಗಿದ್ದಾರೆ. ನಿನ್ನೆ ಸಂಜೆ ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ಹೋದ ಸಂದರ್ಭದಲ್ಲಿ ವಿ.ಬಾಲಕೃಷ್ಣ ಮತ್ತು ಸಿಪಿಐ ವಿಜಯ್ ಕುಮಾರ್ ನಡುವೆ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ವಿ.ಬಾಲಕೃಷ್ಣ, ಸಿಪಿಐ ವಿಜಯ್ ಕುಮಾರ್ ಅವರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ.
ಸಿಪಿಐ ವಿಜಯ್ ಕುಮಾರ್ ದೂರಿನ ಮೇರೆಗೆ, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಬಾಲಕೃಷ್ಣ ವಿರುದ್ಧ ಐಪಿಸಿ ಸೆಕ್ಷನ್ 353 (ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ), ಐಪಿಸಿ ಸೆಕ್ಷನ್ 332 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಇಂದು ಆರೋಪಿ ಬಾಲಕೃಷ್ಣ ಅವರನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಲು ಕೋರ್ಟ್ ಗೆ ಮನವಿ ಮಾಡುವ ಸಾಧ್ಯತೆ ಇದೆ.










