ಕಾಂಗ್ರೆಸ್‍ನವರು ಇನ್ಮುಂದೆ ಕಿವಿಗೆ ಚೆಂಡು ಹೂವು ಇಟ್ಟುಕೊಂಡೇ ಓಡಾಡಬೇಕು : ಸಿ.ಟಿ ರವಿ ಲೇವಡಿ…

101
firstsuddi

ಚಿಕ್ಕಮಗಳೂರು: ಬಜೆಟ್ ವಿರುದ್ಧ ಕಾಂಗ್ರೆಸ್‍ನವರು ಕಿವಿಗೆ ಚೆಂಡು ಹೂವಿಟ್ಟು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಕಾಂಗ್ರೆಸ್ಸಿಗರಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ, ಇನ್ನು ಮುಂದೆ ಅವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡೇ ಓಡಾಡಬೇಕು ಎಂದು ವ್ಯಂಗ್ಯವಾಡಿದರು.

ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಜನ ಕಾಂಗ್ರೆಸ್ಸಿಗೆ ಚೆಂಡುಹೂವು ಇಡಿಸುವ ಬದಲು, ನಾವೇ ಇಟ್ಟುಕೊಳ್ಳೋಣ ಎಂದು ಕಿವಿಗೆ ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ಸಿಗರು ಕಿವಿಗೆ ಚೆಂಡು ಹೂವನ್ನು ಇಟ್ಟುಕೊಂಡು ರಾಜ್ಯದ ಜನತೆಯ ಹಿತವನ್ನು ಬಯಸಿದ್ದಾರೆ. ರಾಜ್ಯದ ಹಿತವೂ ಬಿಜೆಪಿಯ ಗೆಲುವಿನ ಜೊತೆಗಿದೆ. ಕಾಂಗ್ರೆಸ್ ರಾಜ್ಯದ ಹಿತ ಹಾಗೂ ಬಿಜೆಪಿಯ ಗೆಲುವನ್ನು ಬಯಸಿದ್ದಕ್ಕೆ ಕಾಂಗ್ರೆಸ್ಸಿಗೆ ಧನ್ಯವಾದ ತಿಳಿಸಿದರು.

ಬಜೆಟ್ ಬಗ್ಗೆ ಮಾತನಾಡಿದ ಅವರು, ಬೊಮ್ಮಾಯಿ ಬಜೆಟ್ ಜನರಲ್ಲಿ ಹೊಸ ಆಶಯ ಬಿಂಬಿಸುವ ಬಜೆಟ್ ಆಗಿದೆ. ಇದೊಂದು ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿರುವ ಬಜೆಟ್ ಆಗಿದ್ದು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಗೃಹಿಣಿ ಶಕ್ತಿ ಯೋಜನೆ, ಮೂಲ ಸೌಲಭ್ಯ, ನೀರಾವರಿಗೆ ಕೊಟ್ಟಿರುವ ವಿಶೇಷ ಯೋಜನೆ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಚಿಕ್ಕಮಗಳೂರಿಗೂ ಜವಳಿ ಪಾರ್ಕ್, ಶೃಂಗೇರಿಗೆ 100 ಬೆಡ್ ಹಾಸಿಗೆಯುಳ್ಳ ಆಸ್ಪತ್ರೆ, ಕಾಫಿನಾಡಿಗೆ ನೂತನ ವಿಶ್ವವಿದ್ಯಾನಿಲಯ ವಿವಿಧ ಯೋಜನೆ ನೀಡಿದೆ. ಇದು ಅಭಿವೃದ್ಧಿ ಕರ್ನಾಟಕದ ಆಶಯದ ಬಜೆಟ್ ಎಂದರು.