ಟಿಪ್ಪರ್ ಹರಿದು ದಂಪತಿ ಸಾವು – ಮಗು ಪ್ರಾಣಾಪಾಯದಿಂದ ಪಾರು…

65
firstsuddi

ಕಲಬುರಗಿ : ದ್ವಿಚಕ್ರ ವಾಹನದ ಮೇಲೆ ಟಿಪ್ಪರ್ ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಉದನೂರು ಕ್ರಾಸ್ ಬಳಿ ನಡೆದಿದೆ.

ರಾಣೋಜಿ ವಾಡೇಕರ್(42), ರೇಣುಕಾ ವಾಡೇಕರ್(35) ಮೃತ ದುರ್ದೈವಿಗಳು. ಮೃತರು ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮದ ನಿವಾಸಿಗಳಾಗಿದ್ದು, ನಿನ್ನೆ ರಾತ್ರಿ ರಾಣೋಜಿ ಪತ್ನಿ ಮತ್ತು ಮಗು ಜೊತೆ ಕಲಬುರಗಿ ನಗರದಿಂದ ಶರಣಸಿರಸಗಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದರಂತೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಮರಳು ಟಿಪ್ಪರ್ ಬೈಕ್ ಗೆ ಗುದ್ದಿದೆ. ಟಿಪ್ಪರ್ ನ ಚಕ್ರದಡಿ ಸಿಲುಕಿ ಪತಿ, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಗು ವಾಹನದ ಕೆಳಗೆ ಸಿಕ್ಕಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದೆ.

ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲೇ ಇದ್ದಂತಹ ಜನ ಆಕ್ರೋಶಗೊಂಡು ಟಿಪ್ಪರ್ ಗ್ಲಾಸ್ ಒಡೆದು ಹಾಕಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.