ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ ಸೋಮಣ್ಣ ಕಣಕ್ಕಿಳಿಯುತ್ತಲೇ ವರುಣಾ ವಿಧಾನಸಭಾ ಕ್ಷೇತ್ರ ರಣಕಣವಾಗಿ ಬದಲಾಗಿದೆ. ವರುಣಾ ಕ್ಷೇತ್ರಕ್ಕೆ ಮತ್ತೆ ಮತ ಪ್ರಚಾರಕ್ಕೆ ಸಿದ್ದರಾಮಯ್ಯ ಆಗಮಿಸಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗೂ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿಬಂದರು. ಇವತ್ತು ಮತ್ತೆ ಬಂದಿದ್ದಾರೆ. ಮುಂದಿನವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೇ ಎಂದಿದ್ದಾರೆ.
ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಬಳಿಕ ವರುಣಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಲಿದ್ದಾರೆ. ರಾತ್ರಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದಾರೆ.










