ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ…

63
firstsuddi

ಸ್ಯಾಂಡಲ್ ವುಡ್ ನ ಖ್ಯಾತ ಸಾಹಸ ನಿರ್ದೇಶಕ, ಮಲಯಾಳಂ ಮೂಲದ ಜಾಲಿ ಬಾಸ್ಟಿನ್ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಜಾಲಿ ಅವರು 1966ರಲ್ಲಿ ಕೇರಳದ ಅಲೆಪ್ಪೆಯಲ್ಲಿ ಜನಿಸಿದರು. ಆದರೆ, ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದರು. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಅವರನ್ನು ಗುರುತಿಸಿದ ಕೆಲವರು, ಸ್ಟಂಟ್​ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು.

ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.

‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಜಾಲಿ ಕೆಲಸ ಮಾಡಿದ್ದಾರೆ. ಜಾಲಿ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.