ಉಳ್ಳಾಲ: ಕೊರಗಜ್ಜನ ಬಗ್ಗೆ ಸಾಕಷ್ಟು ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಸಿನಿಮಾ ಮಾಡುತ್ತಿದ್ದೇನೆ. ಸಿಟಿ ಲೈಫ್ಸ್ ಎನ್ನುವ ಶೀರ್ಷಿಕೆಯಡಿ ಚಿತ್ರವನ್ನು ನಾನೇ ನಿರ್ದೇಶಿಸಲಿದ್ದೇನೆ” ಎಂದು ನಟ ದುನಿಯಾ ವಿಜಯ್ ಹೇಳಿದರು. ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ್ದ ನಟ ದುನಿಯಾ ವಿಜಯ್, ದರ್ಶನ ಪಡೆದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡರು. ”ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ. ನಾನು ಅಭಿನಯಿಸುತ್ತಿರುವ 29ನೇ ಚಿತ್ರವನ್ನು ‘ಕಾಟೇರಾ’ದ ಜಡೇಶ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿಧೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ, ಮಂಗಳೂರಿಗೆ ಭೇಟಿ ನೀಡಿದ್ದೇನೆ” ಎಂದರು. ಕೊರಗಜ್ಜನ ಬಗ್ಗೆ ದಿನಾಲೂ ಕೇಳುತ್ತಲೇ ಇದ್ದೇನೆ. ಹಾಗಾಗಿ, ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ನನ್ನ ‘ಭೀಮ’ ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಇಟ್ಟು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಸಿನೆಮಾದ ಗೌರವ ಉಳಿಸಿದ್ದಾರೆ” ಎಂದು ಧನ್ಯವಾದ ತಿಳಿಸಿದರು.










