ಸೋತಿದ್ದೇನೆ ಅಷ್ಟೇ, ಸತ್ತಿಲ್ಲ ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ; ನಿಖಿಲ್ ಕುಮಾರಸ್ವಾಮಿ.

25

ರಾಮನಗರ: ನಮ್ಮ ಪಕ್ಷದ ಆಧಾರ ಸ್ತಂಭಗಳೇ ನಿಷ್ಠಾವಂತ ಕಾರ್ಯಕರ್ತರುಗಳು, ರಾಮನಗರ ಜಿಲ್ಲೆ ನಮಗೆ ರಾಜಕೀಯ ಜೀವನ ನೀಡಿದೆ. ನನ್ನ ಜೀವನವೇ ಹೋರಾಟ, ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸವನ್ನು ಹೊಂದಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಬಿಡದಿಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು. 2019ರಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವವರ ಬಗ್ಗೆ ನಾನು ಎಂದಿಗೂ ಹಗುರವಾಗಿ ಮಾತನಾಡಿಲ್ಲ. ನಾನು ಯುವಕನಾಗಿದ್ದೇನೆ, ಯುವ ಸಮುದಾಯದ ಪೀಳಿಗೆಗೆ ನನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಶಯ ಎಂದರು. ಸೋತಿದ್ದೀನಿ ಅಷ್ಟೇ ಸತ್ತಿಲ್ಲ. “ನಾನು ಭಾವನಾತ್ಮಕ ಮನುಷ್ಯ. ಕುಮಾರಣ್ಣ ರೀತಿ ನಾನು ಜನರೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದೇನೆ. ನಾವು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಬೇಕು. ನನಗೆ ಕೇವಲ 36 ವರ್ಷ ನನಗಿದು ಚಿಕ್ಕ ವಯಸ್ಸು, ದಯವಿಟ್ಟು ನನ್ನನ್ನು ಬಳಸಿಕೊಳ್ಳಿ, ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ” ಎಂದು ತಿಳಿಸಿದರು. ರಾಮನಗರ ಜಿಲ್ಲೆಯು ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ, ಮೂರು ಬಾರಿ ಕುಮಾರಣ್ಣ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದೆ. ಚುನಾವಣೆಯಲ್ಲಿ ಏಳು ಬೀಳು ಸರ್ವೆ ಸಾಮಾನ್ಯ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಭೆಗೂ ಮುನ್ನ ತಂಬಾಕು ಬೆಳೆಯುವ ರೈತರ ಜತೆ ಸಭೆ ನಡೆಸಿದರು. “ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ತಂಬಾಕು ಬೆಳೆದ ರೈತರು ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸೂಕ್ತ ಬೆಂಬಲ ಕೊಡಿಸಿ ಎಂದು ಕೇಂದ್ರ ಸಚಿವರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ದವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ ಇಲ್ಲಿಯವರೆಗೂ ನಾನು, ಪಕ್ಷ ಸಂಕಷ್ಟದಲ್ಲಿತ್ತು. ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ನಿಮ್ಮಲ್ಲರ ಆಶೀರ್ವಾದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.