ಮಾಕೋನಹಳ್ಳಿ ಸಹಕಾರ ಸಂಘಕ್ಕೆ ₹20.53 ಲಕ್ಷ ಲಾಭ: ಎಂ.ಎನ್. ಅಶ್ವಥ್

7

ಮೂಡಿಗೆರೆ: ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 50 ವರ್ಷಗಳನ್ನು ಪೂರೈಸಿದ್ದು, 2025-26ನೇ ಸಾಲಿನಲ್ಲಿ ₹20.53 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್. ಅಶ್ವಥ್ ತಿಳಿಸಿದರು.

ಮಾಕೋನಹಳ್ಳಿ ಸಮುದಾಯ ಭವನದಲ್ಲಿ ನಡೆದ ಸಂಘದ 50ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರಲ್ಲಿ ಸಹಕಾರ ಮನೋಭಾವ ಬೆಳೆಸುವುದು ಸಂಘದ ಪ್ರಮುಖ ಧ್ಯೇಯವಾಗಿದೆ. ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರು ಹಾಗೂ ಬೆಳೆಗಾರರಿಗೆ ಅನುಕೂಲವಾಗುವಂತೆ ಫ್ಯಾಕ್ಟ್, ಪಿಪಿಎಲ್ ಕೋರಮಂಡಲ್ ಹಾಗೂ ಇಫ್ಕೋ ಗೊಬ್ಬರ ಕಂಪನಿಗಳ ಡೀಲರ್‌ಶಿಪ್ ಪಡೆಯಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಅಜಿತ್ ಅವರು ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ, ಗೊಬ್ಬರ ಸಾಲ, ಮಧ್ಯಮಾವಧಿ ಸಾಲ, ವಾಹನ ಸಾಲ, ಭವಿಷ್ಯ ನಿಧಿ ಮೇಲಿನ ಸಾಲ, ವೇತನ ಸಾಲ, ವ್ಯಾಪಾರ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಧಾನ್ವಿತ ಎಸ್.ಜೆ., ಧೃತಿ ಕೆ.ಎಸ್., ಸಾನಿತ್ಯ ಎಂ.ಎಸ್. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಣವ್ ಎಸ್.ಬಿ., ಭರದ್ವಾಜ್ ಪಿ.ಯು. ಮತ್ತು ಸುದೀಪ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಮೂರ್ತಿ ಪಿ.ಎಸ್., ನಿರ್ದೇಶಕರಾದ ಜಿ.ಯು. ಚಂದ್ರೇಗೌಡ, ಎಂ.ಎಲ್. ಕಲ್ಲೇಶ್, ಎಸ್.ವಿ. ಸಂದೀಪ್, ಬಿ.ಟಿ. ಮಂಜುಳ, ಶೃತಿ ಡಿ.ಸಿ., ಮನು ಎಂ.ಎನ್., ದೇವಿಪ್ರಸಾದ್ ಎನ್.ಎಸ್., ರವಿಕಿರಣ್ ಜಿ.ವಿ., ಅಣ್ಣಪ್ಪ ಎನ್.ಟಿ. ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ, ಪದನಿಮಿತ್ತ ನಿರ್ದೇಶಕ ನಿತಿನ್ ಪಟೇಲ್ ಉಪಸ್ಥಿತರಿದ್ದರು. ಬ್ಯಾಂಕ್ ಸಿಬ್ಬಂದಿ, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.