ಚಿಕ್ಕಮಗಳೂರು : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಸಲಹೆ ಮಾಡಿದರು.
ತಾಲ್ಲೂಕಿನ ಅಲ್ಲಂಪುರದ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ಗಿಡ ಮರಗಳನ್ನು ನೆಟ್ಟು ಕಾಡನ್ನು ಸಮೃದ್ದವಾಗಿ ಬೆಳೆಸುತ್ತಿದ್ದರು, ಅದರಿಂದಾಗಿ ಆಗ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ದೇಶ ಸಮೃದ್ದಿಯಾಗಿತ್ತು ಎಂದರು.
ಆಧುನಿಕತೆ ಬೆಳೆದಂತೆ ನಮ್ಮಲ್ಲಿ ಪ್ರಕೃತಿಯ ಬಗ್ಗೆ ಇದ್ದ ದೈವಿಕ ಭಾವನೆ ಮರೆಯಾಗಿದೆ. ನಮ್ಮ ದುರಾಸೆಯಿಂದಾಗಿ ಬೆಟ್ಟ, ಗುಡ್ಡ, ಕಾಡು ಕಣ್ಮರೆಯಾಗಿವೆ ಇದರ ಪರಿಣಾಮ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿದ್ದು, ಅತಿವೃಷ್ಠಿ, ಅನಾವೃಷ್ಠಿ, ಭೂಕಂಪ ಸಂಭವಿಸುತ್ತಿವೆ. ಎಲ್ಲೆಡೆ ಬರದ ಭೀತಿ ಕಾಡುತ್ತಿದೆ ಎಂದು ವಿಷಾದಿಸಿದರು.
ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಪರಿಸರ ಸಂರಕ್ಷಣೆಯನ್ನು ನಮ್ಮ ಜವಾಬ್ದಾರಿಯೆಂದು ತಿಳಿದು ಸ್ವಯಂ ಪ್ರೇರಿತರಾಗಿ ಗಿಡ,ಮರ, ಕಾಡನ್ನು ವ್ಯಾಪಕವಾಗಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಮಾತನಾಡಿ ಪರಿಸರ ಸಂರಕ್ಷಣೆಯನ್ನು ನಮ್ಮ ಆದ್ಯ ಕರ್ತವ್ಯವೆಂದು ನಾವು ಭಾವಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಹಸಿರು ಉಳಿಯಲು ಸಾಧ್ಯ ಎಂದು ತಿಳಿಸಿದರು.
ವನ ಮಹೋತ್ಸವದ ಪ್ರಯುಕ್ತ ಶಾಲಾ ಆವರಣದಲ್ಲಿ ಕರಿಬೇವು, ನಿಂಬೆ, ಮಾವು, ನೇರಳೆ, ಚೆರ್ರಿ, ಹಲಸು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಲಯನ್ಸ್ ಕಾರ್ಯದರ್ಶಿ ಮನೋಜ್ ಬಸವರಾಜ್, ಮಾಜಿ ಅಧ್ಯಕ್ಷ ಮಂಜುನಾಥ ಗೌಡ, ನಿವೃತ್ತ ಮುಖ್ಯ ಶಿಕ್ಷಕ ರೇವಣ್ಣಗೌಡ, ಶಿಕ್ಷಕ ಪರಮೇಶ್ ಉಪಸ್ಥಿತಿರಿದ್ದರು.










