ಕೊಪ್ಪ: ಹಬ್ಬ-ಹರಿದಿನಗಳಲ್ಲೂ ಕುಟುಂಬದಿಂದ ದೂರವಿದ್ದು, ವಿಶ್ರಾಂತಿಯಿಲ್ಲದೆ ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗೌರಿ-ಗಣೇಶ ಹಬ್ಬದ ಅಂಗವಾಗಿ ಬಾಗಿಣ ನೀಡಿ ಗೌರವಿಸಿದ ಅಪರೂಪದ ಘಟನೆ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಜಯಪುರ ಪೊಲೀಸ್ ಠಾಣೆಯ ಪಿಎಸ್‌ಐ ರವೀಶ್ ಅವರು ಠಾಣೆಯ ಮಹಿಳಾ ಸಿಬ್ಬಂದಿಗೆ ಸಾಂಪ್ರದಾಯಿಕವಾಗಿ ಬಾಗಿಣ ಅರ್ಪಿಸಿ, ಹಬ್ಬದ ಸಿಹಿ ವಿತರಿಸಿ ಶುಭಾಶಯ ಕೋರಿದರು.
ಸಾರ್ವಜನಿಕರ ಸುರಕ್ಷತೆಗಾಗಿ ಹಬ್ಬದ ದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಠಾಣೆಯಲ್ಲೇ ಹಬ್ಬದ ವಾತಾವರಣ ಕಲ್ಪಿಸುವ ಉದ್ದೇಶದಿಂದ ಪಿಎಸ್‌ಐ ರವೀಶ್ ಅವರು ಪ್ರತಿವರ್ಷ ಈ ರೀತಿಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಮಹಿಳಾ ಸಿಬ್ಬಂದಿಯನ್ನು ಸಹೋದ್ಯೋಗಿಗಳಂತೆ ಮಾತ್ರವಲ್ಲದೆ ಕುಟುಂಬದ ಸದಸ್ಯರಂತೆ ಗೌರವಿಸುವ ಮೂಲಕ ಅವರಲ್ಲಿ ಆತ್ಮೀಯತೆ ಹಾಗೂ ಸೌಹಾರ್ದತೆಯ ಭಾವನೆ ಮೂಡಿಸಿದ್ದಾರೆ. ಕರ್ತವ್ಯದ ಒತ್ತಡದ ನಡುವೆಯೂ ಸಿಬ್ಬಂದಿಯ ಭಾವನೆಗಳಿಗೆ ಸ್ಪಂದಿಸಿ ಹಬ್ಬದ ಸಂಭ್ರಮ ಹಂಚಿಕೊಂಡಿರುವ ಪಿಎಸ್‌ಐ ಅವರ ನಡೆಗೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಿಎಸ್‌ಐ ರವೀಶ್ ಅವರು ಈ ಹಿಂದೆ ಮಲ್ಲಂದೂರು ಹಾಗೂ ಬಾಳೆಹೊನ್ನೂರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಮಹಿಳಾ ಸಿಬ್ಬಂದಿಗೆ ಹಬ್ಬದ ಸಂದರ್ಭದಲ್ಲಿ ಬಾಗಿಣ ನೀಡಿ ಗೌರವಿಸುತ್ತಿದ್ದರು.










