ಚಾಮರಾಜನಗರ: ಬಂಡೀಪುರ ಅರಣ್ಯದದಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಅರಣ್ಯ ಪ್ರದೇಶದ ಸಹಸ್ರಾರು ಎಕರೆ ಭೂಮಿಯಲ್ಲಿದ್ದ ಮರಗಿಡಗಳು, ವಾಸವಾಗಿದ್ದ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ. ಸುಮಾರು 2500 ಎಕರೆ ಪ್ರದೇಶದ ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆ ಸುತ್ತುವರೆದಿದ್ದು, ಪ್ರಾಣಿಗಳು ಜೀವಂತ ಸುಟ್ಟು ಬೂದಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಅಗ್ನಿ ಶಾಮಕದಳದವರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಿಟ್ ಮಾಡಿದ್ದು, ಬಂಡೀಪುರ ಮೀಸಲು ಅರಣ್ಯದ ಬೆಂಕಿ ಅವಘಡದ ಬೆಳವಣಿಗೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅರಣ್ಯ ಸಚಿವರು ಬೆಂಕಿ ಹರಡದಂತೆ ನಡೆಯುತ್ತಿರುವ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದಾರೆ. ಇಂತಹ ದುರಂತ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.











