ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಸ್ಥಳದಲ್ಲೇ 13 ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬ್ಯಾಲದಕೆರೆ ಬಳಿ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡು ಮೂಲದ ಮಂಜುನಾಥ್ (35), ತನುಜಾ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ರಾಜೇಂದ್ರ (27), ಸುಂದರ್ ರಾಜ್ (48), ಸರಳ (32), ಪ್ರಶನ್ಯಾ(14) ಹಾಗೂ ಬೆಂಗಳೂರು ಮೂಲದ ಲಕ್ಷ್ಮೀಕಾಂತ್ (24), ಸಂದೀಪ್ (36), ಮಧು (28)ಎಂದು ಗುರುತಿಸಲಾಗಿದ್ದು, ಮೃತರು ಕಾರಿನಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾದ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಹೊಡೆದಿದ್ದು, ಪರಿಣಾಮ ಕಾರುಗಳಲ್ಲಿದ್ದ 13 ಮಂದಿ ದುರಂತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶ್ವೇತಾ, ಅರ್ಪಿತಾ, ಮಾಲಾಶ್ರೀ, ಗಂಗೋತ್ರಿ ಹಾಗೂ ಪ್ರಕಾಶ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಐವರು ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಈ ಕುರಿತು ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.










