ಮೂಡಿಗೆರೆ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ್ಯ ತರಬೇತಿ ಸಂಸ್ಥೆಯ ಮುಖ್ಯಸ್ಥ ರಂಗಸ್ವಾಮಿ ಅವರು ಅಭಿಪ್ರಾಯ ಪಟ್ಟರು. ಪಟ್ಟಣದ ಡಿ.ಎಸ್.ಬಿ.ಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಅಧುನಿಕ ಯುಗದಲ್ಲಿ ಯುವಕರು ಓದಿನ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿಕೊಂಡಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದ ಅವರು ಸಾಮಾನ್ಯವಾಗಿ ಶಿಕ್ಷಣಕ್ಕೆ ಒತ್ತು ನೀಡಿ ಅಂಕಗಳೊಂದಿಗೆ ಪದವಿ ಪತ್ರಗಳನ್ನು ಪಡೆದುಕೊಳ್ಳುವುದು ಮುಖ್ಯ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಯುವ ಜನತೆ ತಮ್ಮ ಓದಿನ ನಂತರ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದಾಗ ಪದವಿ ಅರ್ಹತೆಯ ಜೊತೆಗೆ ಕೆಲಸದ ಅನುಭವ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಶಿಕ್ಷಣದ ಹೊರತಾಗಿ ಬೇರೆ ಕೌಶಲ್ಯಗಳನ್ನು ಹೊಂದಿಲ್ಲದ ಸ್ಪರ್ಧಾಳುಗಳನ್ನು ಮುಲಾಜಿಲ್ಲದೆ ಹೊರಕ್ಕೆ ಕಳುಹಿಸಲಾಗುತ್ತದೆ. ಇಂತಹ ಕೆಟ್ಟ ಅನುಭವದಿಂದ ಪಾರಾಗಬೇಕಾದರೆ ಶಿಕ್ಷಣವನ್ನು ಹೊರತುಪಡಿಸಿದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಒಳಿತು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೌಶಲ್ಯ ಸಂಸ್ಥೆಯ ಉಮೇಶ್ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಈಗ ಅರಾಮವಾಗಿದ್ದುಕೊಂಡು ನಂತರ ನೋಡಿದರಾಯಿತು ಎಂದುಕೊಳ್ಳುವಂತಿಲ್ಲ. ಉದ್ಯೋಗದಾತರು ಸಣ್ಣಪುಟ್ಟ ವಿಚಾರಗಳನ್ನು ಗಂಭಿರವಾಗಿ ಗಣನೆಗೆ ತೆಗೆದುಕೊಳ್ಳುವುದರಿಂದ ಬಹಳ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಮುಂದೆ ಕಷ್ಟಪಡಬೇಕು ಎಂದು ತಿಳಿಹೇಳಿದರು.
ಕಾಲೇಜಿನ ಪ್ರಾಂಶುಪಾಲ ಬಸವರಾಜಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉನ್ನತವಾದ ಗುರಿ ಇರಬೇಕು. ದೊಡ್ಡ ಗುರಿ ಇದ್ದ ಮಾತ್ರಕ್ಕೆ ಎಲ್ಲವೂ ಸಾಧ್ಯವಾಗುವುದಿಲ್ಲ. ಅದನ್ನು ಸಾಧ್ಯವಾಗಿಸುವಲ್ಲಿನ ಪರಿಶ್ರಮಕ್ಕೆ ನಾವು ಸಿದ್ಧರಾದಾಗ ಮಾತ್ರ ಯಶಸ್ಸಿನ ಸವಿ ಉಣ್ಣಲು ಸಾಧ್ಯ. ಹಿಂದಿನ ಕಾಲದಂತೆ ಇಂದು ಇಲ್ಲ. ಹೆಚ್ಚು ಅವಕಾಶಗಳು ಅವಕಾಶಗಳು ಕಣ್ಣಮುಂದಿವೆ. ಅವಕಾಶಗಳನ್ನು ಬಾಚಿಕೊಳ್ಳಬೇಕೆಂದರೆ ನಾವು ಕೌಶಲ್ಯರಾಗಿರಬೇಕು. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಇಂಥಹ ಹಲವು ವೃತ್ತಿಪರ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ನೀಡುತ್ತಿರುವುದು ನಿಮ್ಮ ಸೌಭಾಗ್ಯ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಾಗಾರದಲ್ಲಿ ಕೌಶಲ ಕೈಪಿಡಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ 400 ವಿದ್ಯಾರ್ಥಿಗಳನ್ನು ಕೌಶಲ ತರಬೇತಿಗಾಗಿ ನೊಂದಣಿ ಮಾಡಿಸಲಾಯಿತು. ಕೌಶಲ ತರಬೇತಿ ಸಂಸ್ಥೆಯ ಮಂಜುನಾಥ್ ಹಾಗೂ ಪ್ರವೀಣ್, ಕಾಲೇಜಿನ ಕೌಶಲ ತರಬೇತಿ ವಿಭಾಗದ ಮುಖ್ಯಸ್ಥೆ ಅಪೂರ್ವ, ಉದ್ಯೋಗ ಮಾಹಿತಿ ವಿಭಾಗದ ಮುಖ್ಯಸ್ಥೆ ನಿವೇದಿತಾ, ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ :ಯುವಕರು ಓದಿನ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿಕೊಂಡಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ:...










