ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ…

160
firstsuddi

ಬೆಂಗಳೂರು : ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಹಾಮಾರಿ ಕೊರೊನಾ ಸೋಂಕಿನಿಂದ ಶಾಲೆಗಳು ಇನ್ನೂ ಆರಂಭವಾಗದೆ ಇರುವ ಹಿನ್ನೆಲೆ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್‍ವರ್ಕ್ ಗಳಿಲ್ಲದೇ ಆನ್‍ಲೈನ್ ತರಗತಿಗಳಿಂದ ವಂಚಿತರಾಗುತ್ತಾರೆ ಎಂಬ ಕಾರಣದಿಂದ ವಿದ್ಯಾಗಮ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯ ಅಡಿ ಶಿಕ್ಷಕರು ಗ್ರಾಮೀಣ ಭಾಗಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಬೇಕಾಗಿತ್ತು. ಅದರಂತೆ ಗ್ರಾಮೀಣ ಭಾಗಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಕೆಲವು ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಕೂಡಾ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಮಕ್ಕಳ ಹಾಗೂ ಶಿಕ್ಷಕರ ಜೀವಕ್ಕೆ ಅಪಾಯವಾಗುತ್ತಿದೆ ಎಂದು ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ, ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.