ರಾಯಚೂರು : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ 100 ಕೋಟಿ ರೂ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಂಪ್ ಅವರ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ಹಣ ಖರ್ಚಾಗಿದೆ ಎನ್ನುವುದು ಊಹಾಪೋಹಾದ ಮಾತು. ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ 100 ಕೋಟಿ ರೂ. ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿರುವುದರಿಂದ ಅಮೆರಿಕಾದ ಜೊತೆಗೆ ಇತರೆ ದೇಶಗಳ ನಡುವೆ ಬಾಂಧವ್ಯ ಬೆಸೆಯುವ ಸಾಧ್ಯತೆ ಇದೆ. ಪ್ರತೀ ದೇಶಕ್ಕೆ ತನ್ನದೇ ಆದಂತಹ ಸಮಸ್ಯೆಗಳಿರುತ್ತವೆ. ಅದರಂತೆ ಅಮೆರಿಕಾಕ್ಕೆ ಹೋದರೆ ಅಲ್ಲಿಯೂ ಸಮಸ್ಯೆ ಇರುತ್ತದೆ. ಸಮಸ್ಯೆಯನ್ನು ಮುಚ್ಚಿಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಎಲ್ಲಾ ಸಮಸ್ಯೆಗಳು ಒಂದೇ ಬಾರಿಗೆ ಬಗೆಹರಿಯುವುದಿಲ್ಲ. ದೇಶದ ಅಭಿವೃದ್ಧಿಗೆ ಉತ್ತಮ ಕಾರ್ಯವನ್ನು ನಿರ್ವಹಿಸಬೇಕು. ಅಲ್ಲದೇ ಪಾಕಿಸ್ತಾನವನ್ನು ಕೈಬಿಟ್ಟರೆ ಪೂರ್ಣ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಅಮೆರಿಕಾ ಜೊತೆಗಿಟ್ಟುಕೊಂಡಿದೆ. ದೇಶದ ಹಿತಾಸಕ್ತಿ ಕಾಪಾಡಲು ನಮ್ಮ ನಾಯಕರಿದ್ದಾರೆ.
ಇದೇ ವೇಳೆ 30 ಜನ ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಯಾರೂ ಕೂಡಾ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಮೊದಲು ತಮ್ಮ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಲಿ ಎಂದರು.










