ಅಂಬರೀಶ್ ಅವರ ಕನಸನ್ನು ಪೂರ್ಣಗೊಳಿಸುವುದೇ ನನ್ನ ಮೊದಲ ಕೆಲಸ : ಸುಮಲತಾ ಅಂಬರೀಶ್…

334
firstsuddi

ಬೆಂಗಳೂರು : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ 6ತಿಂಗಳ ಪುಣ್ಯಸ್ಮರಣೆಯ ಪೂಜೆಯನ್ನು ಸಲ್ಲಿಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ಅಂಬರೀಶ್ ಅವರ ಕನಸನ್ನು ಪೂರ್ಣಗೊಳಿಸುವುದೇ ನನ್ನ ಮೊದಲ ಕೆಲಸ. ನಾನು ಚುನಾವಣೆಯಲ್ಲಿ ಗೆದ್ದಿದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನನಗೆ ಕರೆ ಮಾಡಿ ಶುಭ ಕೋರಿದ್ದಾರೆ. ಮಂಡ್ಯದ ಜನರ ನಿರ್ಧಾರವನ್ನು ಕೇಳಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈಗಲೂ ಮಂಡ್ಯ ಜನರನ್ನು ಕೇಳಿ ಮುನ್ನಡೆಯುತ್ತೇನೆ. ಎಷ್ಟೇ ಹಣವನ್ನು ಚೆಲ್ಲಿ ಚುನಾವಣೆ ಮಾಡಿದರೂ ಮಂಡ್ಯದ ಜನರು ಮೋಸಕ್ಕೆ ಮರುಳಾಗದೇ ಪ್ರೀತಿಗೆ ಮರುಳಾಗಿದ್ದಾರೆ. ಇದು ಮಂಡ್ಯದ ಸ್ವಾಭಿಮಾನದ ಗೆಲುವು ಹಾಗೂ ಅಂಬಿಯ ಗೆಲುವು. ನಾನು ಕಾಂಗ್ರೆಸ್ ನಾಯಕರಲ್ಲಿ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೆ. ಆದರೆ ಅವರು ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿದ್ದರೆ ನಾನು ಸುಲಭವಾಗಿ ಗೆಲ್ಲುತ್ತಿದ್ದೆ.
ನನ್ನನ್ನು ಅವಮಾನಿಸಿದವರಿಗೆ ಚುನಾವಣಾ ಫಲಿತಾಂಶ ಆಶ್ಚರ್ಯ ತಂದಿದೆ. ಮಂಡ್ಯದ ಜನರು ನನ್ನ ಪರವಾಗಿ ಇದ್ದಾರೆ ಎಂಬುವುದಕ್ಕೆ ಇದೇ ಸಾಕ್ಷಿ. ನನ್ನನ್ನು ಟೀಕೆ ಮಾಡಿದವರಿಗೆ ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದೆ. ಈಗಾ ಮಂಡ್ಯದ ಜನರೇ ತಕ್ಕ ಉತ್ತರವನ್ನು ನೀಡಿದ್ದಾರೆ. ಮಂಡ್ಯ ಜನರ ಪ್ರೀತಿಯಲ್ಲಿ ನಾನು ಅಂಬರೀಶ್ ಅವರನ್ನು ಕಾಣುತ್ತೇನೆ. ಮೇ 29ರಂದು ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ಮಂಡ್ಯದ ಜನತೆಗೆ ಕೃತಜ್ಞತೆಯನ್ನು ತಿಳಿಸುತ್ತೇನೆ. ಅಂಬರೀಶ್ ಅವರ ಹುಟ್ಟುಹಬ್ಬದ ದಿನದಂದೇ ವಿಜಯೋತ್ಸವವನ್ನು ಆಚರಿಸುತ್ತೇವೆ ಎಂದು ಹೇಳಿದ್ದಾರೆ.