ಲಕ್ನೋ : ಮಹಿಳೆಯೊಬ್ಬಳು ಕಟ್ಟಿಕೊಂಡ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ರೇಖಾ ತನ್ನ ಪತಿ ಚಮನ್ ಪ್ರಕಾಶ್ ನನ್ನು ಹತ್ಯೆಗೈದಿದ್ದಾಳೆ. ರೇಖಾ ಬೇರೆ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದಾಗ ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಘಟನೆ ವೇಳೆ ಶೇ. 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಚಮನ್ ಪ್ರಕಾಶ್ ನನ್ನು ನೆರೆಹೊರೆಯವರು ದೆಹಲಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಕೋಸಿಕಲಾ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಅನುಜ್ ಕುಮಾರ್ ಮಾತನಾಡಿ, ಸೋಮವಾರ ಈ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದಾನೆ. ಮೃತನ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆರೋಪಿ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.










