ರಾಯಚೂರು : ಕ್ಲಾಸ್ ರೂಮ್ ನಲ್ಲಿ ಉಪನ್ಯಾಸಕರ ಮುಂದೆಯೇ ವಿದ್ಯಾರ್ಥಿಗಳು ಕಬ್ಬಿಣದ ರಾಡ್ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಗರದ ನವೋದಯ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಓರ್ವನ ತಲೆಗೆ ಪೆಟ್ಟು ಬಿದ್ದಿದ್ದು, 12 ಹೊಲಿಗೆ ಹಾಕಲಾಗಿದೆ. ಮತ್ತೋರ್ವನ ಹಣೆಗೆ ಪೆಟ್ಟು ಆಗಿದೆ.
ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ನವೋದಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಮೇಲೂ ರಾಡ್ ನಿಂದ ರೋಹಿತ್ ಹಲ್ಲೆ ನಡೆಸಿದ್ದಾನೆ. ಈ ಮೂವರೂ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ರೋಹಿತ್ ತನ್ನ ತಾಯಿ ಬರ್ತ್‌ಡೇಗೆ ಸ್ಟೇಟಸ್ ಹಾಕಿದ್ದ. ಆದರೆ ರೋಹಿತ್ ತಾಯಿಯ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿಕೊಂಡು, ಫೋಟೋ ಸ್ಕ್ರೀನ್ ಶಾಟ್ ತೆಗೆದು ಹಾರ್ಟ್ ಸಿಂಬಲ್ ಮೂಲಕ ವೈರಲ್ ಮಾಡಿದ್ದರಂತೆ. ಇದೇ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










