ಚಿತ್ರದುರ್ಗ : ಈಜಲು ತೆರಳಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿಯ ಗಾಯತ್ರಿ ಜಲಾಶಯದಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಜೆಜೆಹಳ್ಳಿಯ ಕೆ.ಹೆಚ್. ರಂಗನಾಥ್ ಬಡಾವಣೆಯ ಸಲ್ಮಾನ್ (24) ಮೃತ ಯುವಕ. ಸಂಪೂರ್ಣ ಭರ್ತಿಯಾಗಿದ್ದ ಜಲಾಶಯದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ನಿನ್ನೆ ಮಧ್ಯಾಹ್ನ ಈಜಲು ಧುಮುಕಿರುವ ಸಲ್ಮಾನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದಿಂದ ನೀರಿಗಿಳಿಯದಂತೆ ಸೂಚನೆ ನೀಡಿದ್ದರೂ ಯುವಕ ನೀರಿನಲ್ಲಿ ಈಜಲು ಹೋಗಿದ್ದಾನೆ ಎನ್ನಲಾಗಿದೆ.










