ಚಿಕ್ಕಮಗಳೂರು : ಚಿಕ್ಕಮಗಳೂರಿನ ಆರ್.ಟಿ.ಓ. ಕಚೇರಿಯಲ್ಲಿ ಅಧಿಕಾರಿಗಳು ಹೆಸರಿಗಷ್ಟೆ. ಇಲ್ಲಿ ಎಲ್ಲಾ ನಡೆಯೋದು ದಲ್ಲಾಳಿಗಳಿಂದಲೇ. ಆರ್.ಟಿ.ಓ. ಕಚೇರಿಯಲ್ಲಿ ಮುಖವಾಡ ಹಾಕಿಕೊಂಡಿರೋ ಸಂಘಟನೆಗಳ ಮುಖ್ಯಸ್ಥರು ದಲ್ಲಾಳಿಗಳೇ ಆಗಿದ್ದಾರೆ. ಅವರು ನಿಜವಾಗಲೂ ಸಂಘಟನೆಗಳ ಮುಖ್ಯಸ್ಥರೋ ಅಥವ ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಖವಾಡದ ಬದುಕು ಸಾಗಿಸ್ತಿದ್ದಾರೋ ಗೊತ್ತಿಲ್ಲ. ಆದರೆ, ಇವರೆಂದರೆ ಅಧಿಕಾರಿಗಳು ಹೆದರೋದಂತು ಸತ್ಯ. ಅಲ್ಲಿ ಇವರು ಹೇಳಿದ್ದೇ ವೇದವಾಕ್ಯ. ಮಾಡಿದ್ದೇ ಕಾನೂನು. ಹೇಳೋರಿಲ್ಲ-ಕೇಳೋರಿಲ್ಲ. ಕೇಳಬೇಕಾದ ಅಧಿಕಾರಿಗಳೇ 11 ಗಂಟೆಗೆ ಬಂದು 2 ಗಂಟೆಗೆ ಮನೆಗೆ ಹೋದ್ರೆ ಅನ್ಯಾಯವನ್ನ ಪ್ರಶ್ನೆ ಮಾಡೋರು ಯಾರು. ಇರೋ ಸಿಬ್ಬಂದಿಗಳು ಹಾಗೂ ಮಧ್ಯಮರ್ತಿಗಳ ಹಾವಳಿಗೆ ಜನ ಹೈರಾಣಾಗಿದ್ದಾರೆ.
ಅತ್ತ ಅಪಘಾತಗಳ ಸಂಖ್ಯೆ ಕಡಿಮೆಯಾಗಲೆಂದು ಸರ್ಕಾರ ನೂತನ ಮೋಟಾರ್ ಕಾಯ್ದೆಯನ್ನ ಜಾರಿಗೆ ತಂದಿದೆ. ಇತ್ತ ಪೊಲೀಸರು ನೋಡಿದರೆ, ಹಾದಿ-ಬೀದಿ, ಗಲ್ಲಿ-ಗಲ್ಲಿಯಲ್ಲಿ ನಿಂತು ಫೈನ್ ಹಾಕುತ್ತಾರೆ. ಯುವಜನತೆ ವಯಸ್ಸಾದ ಬಿಳಿ ತಲೆ ಕಂಡರೂ ಪೊಲೀಸ್ ಅಂತ ಮತ್ತೊಂದು ಗಲ್ಲಿಯಲ್ಲಿ ತಪ್ಪಿಸಿಕೊಳ್ತಿದ್ದಾರೆ. ದಂಡ ಕಟ್ಟಿ ಸಾಕಾದಾಗ ಎಲ್.ಎಲ್.ಆರ್. ಅಥವ ಡಿ.ಎಲ್ ಮಾಡಿಸೋಕೆ ಆರ್.ಟಿ.ಓ. ಕಚೇರಿಗೆ ಬಂದ್ರೆ ಅರ್ಧ ಗಂಟೆ ಕೆಲಸಕ್ಕೆ ಸಾಯಾಂಕಾಲವೂ ಆಯ್ತು ಇಲ್ಲ ನಾಳೆಯೂ ಬರಬೇಕಾಯ್ತು. ಏಕೆಂದರೆ, ದಲ್ಲಾಳಿಗಳು ತಂದಿರೋ ಊರಿನವರದ್ದೆಲ್ಲಾ ಮುಗಿಯ ಬೇಕಲ್ವ ಅದಕ್ಕೆ. ಇನ್ನು ದೂರದ ಊರಿಂದ ಬರುವಂತವರಿಗೆ ನರಕಯಾತನೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ಆರ್.ಟಿ.ಓ. ಕಚೇರಿಯ ಹಿರಿಯ ಅಧಿಕಾರಿಗಳು ಮೌನ ವಹಿಸಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟು, ಮಧ್ಯವರ್ತಿಗಳ ಹಾದಿಯನ್ನ ಸಲೀಸಾಗಿಸಿದೆ.
ದೇಶದಲ್ಲಿ ಭಾನುವಾರು ಕೆಲಸ ನಡೆಯೋ ಸರ್ಕಾರಿ ಕಚೇರಿ ಅಂದರೆ ಅದು ಚಿಕ್ಕಮಗಳೂರಿನ ಆರ್.ಟಿ.ಓ ಮಾತ್ರ. ಓನ್ಲಿ ಫಾರ್ ಸ್ಪೆಷಲ್ ಕೇಸಸ್. ಎಲ್.ಎಲ್.ಆರ್. ಹಾಗೂ ಡಿ.ಎಲ್.ಗೆ ಸರ್ಕಾರ ನಿಗಧಿಪಡಿಸಿರೋ ಮೊತ್ತಕ್ಕಿಂದ 200, 300, 500 ಹೆಚ್ಚಾಗಿ ಕೊಟ್ಟರೆ ಭಾನುವಾರವೂ ನೀವು ಬಂದು ಕೆಲಸ ಮಾಡಿಸಿಕೊಳ್ಳಬಹುದು. ಒಬ್ಬರೇ ಬಂದರೆ ಆಗಲ್ಲ. ಸೋ ಕಾಲ್ಡ್ ಮುಖವಾಡ ಧರಿಸಿರೋ ಮುಖಂಡರ ಜೊತೆಯೇ ಬರಬೇಕು. ಅದೂ ಹೇಗಂತೀರಾ… ಆನ್‍ಲೈನ್ ಟೆಸ್ಟೂ ಇಲ್ಲ. ಟೆಸ್ಟ್ ಡ್ರೈವೂ ಕೋಡ್ಬೇಕಾಗೂ ಇಲ್ಲ. ಮುಖವಾಡ ಧರಿಸಿರೋ ಕೆಲವು ನಕಲಿ ಪತ್ರಕರ್ತರು, ಹಾಗೂ ಸಂಘಟನೆಗಳ ಮುಖ್ಯಸ್ಥರೇ ಇಲ್ಲಿ ಜ್ಯೂನಿಯರ್ ಹಾಗೂ ಸಿನಿಯರ್ ಆರ್.ಟಿ.ಓ. ಅಧಿಕಾರಿಗಳು. ನೀವು, ಸರ್ ನನಗೆ ಬರಲು ಆಗಲ್ಲ. ಇಷ್ಟ್ ಕೊಡ್ತೀನಿ ಅಂದರೆ, ಅವರೇ ನಿಮ್ಮ ಮನೆಗೆ ಬಂದು ಎಲ್ಲಾ ದಾಖಲೆ ಪಡೆದು ನೀವು ಬರದಿದ್ರು ನಿಮ್ಮ ಮನೆ ಬಾಗಿಲಿಗೆ ಎಲ್.ಎಲ್.ಆರ್, ಡಿ.ಎಲ್. ಅಥವ ಡಾಕ್ಯೂಮೆಂಟ್ ಏನನ್ನ ಬೇಕಾದ್ರು ತಂದು ಕೊಡ್ತಾರೆ. ಇದೆಲ್ಲಾ ಅಧಿಕಾರಿಗಳು ಕೊಟ್ಟಿರೋ ಸದರ ಅಂತ ಗುಟ್ಟಾಗೇನು ಉಳಿದಿಲ್ಲ.
ಇಲ್ಲಿ ಆನ್‍ಲೈನ್‍ನಲ್ಲಿ ಎಲ್.ಎಲ್.ಆರ್. ಕೊಡಲು ಐದು ಕಂಪ್ಯೂಟರ್‍ಗಳಿವೆ. ಅವುಗಳಲ್ಲಿ ನಾಲ್ಕು ಶವಪೆಟ್ಟಿಗೆಯಂತಾಗಿದ್ದರೆ, ಜೀವವಿರೋದು ಒಂದಕ್ಕಷ್ಟೆ. ಆನ್‍ಲೈನ್‍ನಲ್ಲಿ ದಿನಕ್ಕೆ 60 ರಿಂದ 80 ಜನಕ್ಕೆ ಎಲ್.ಎಲ್.ಆರ್. ಕೊಡ್ಬೋದು. ಇರೋದು ಒಂದು ಕಂಪ್ಯೂಟರ್ ಎಷ್ಟು ಜನಕ್ಕೆ ಕೊಡಬಹುದು. ಎಲ್ಲರಿಗೂ ಆಗಲ್ಲ. ಆಗ ಅಧಿಕಾರಿಗಳು ಹಾಗೂ ಸೋ ಕಾಲ್ಡ್ ಅಧಿಕಾರಿಗಳೇ ಎಲ್ಲಾ ಮುಗಿಸಿ ಬಿಡ್ತಾರೆ. ಟ್ರಾಫಿಕ್ ರೂಲ್ಸ್ ತಿಳಿಯಬೇಕಾದವ್ರು ಅವ್ಯವಹಾರ ಮಾಡೋದನ್ನ ಕಲಿತು ಹೋಗ್ತಿದ್ದಾರೆ. ಕಂಪ್ಯೂಟರ್ ಕೆಟ್ಟಿರೋದೇ ಇವರಿಗೆ ವರವಾಗಿದೆ. ಲೇಟ್ ಆಗುತ್ತೆ ಇಷ್ಟು ಕೊಟ್ರೆ ಈಗ್ಲೇ ಅಂತ ಬಡವರು-ಶ್ರೀಮಂತರೆನ್ನದೆ ಸುಲಿಗೆ ಮಾಡ್ತಿದ್ದಾರೆ.
ಇನ್ನು ಡಿ.ಎಲ್. ಎಲ್.ಎಲ್.ಆರ್. ಸೇರಿದಂತೆ ಎಲ್ಲದಕ್ಕೂ ಕ್ಯೂನಲ್ಲಿ ನಿಂತು ಹಣ ಕಟ್ಟಬೇಕು. ಇರೋದು ಎರಡೇ ಕೌಂಟರ್. ಒಬ್ಬರು ಇದ್ದರೆ ಮತ್ತೊಬ್ಬರು ಇರಲ್ಲ. ನೆನಪಾದಾಗೆಲ್ಲಾ ಕಾಫಿ-ಟೀ ಅಂತ ಎದ್ದೆದ್ದು ಹೋಗ್ತಿರ್ತಾರೆ. ಆಗಾಗ, ಸಿನಿಯರ್ ಹಾಗೂ ಜ್ಯೂನಿಯರ್ ಅಧಿಕಾರಿಗಳು ಬಂದಾಗೆಲ್ಲಾ ಅವರ ಕೆಲಸ ಮಾಡಿಕೊಡ್ಬೇಕು. ಕ್ಯೂನಲ್ಲಿ ನಿಂತವರ ಕಥೆ ಹರೋಹರ. ಆರ್.ಟಿ.ಓ. ಕಚೇರಿ ಕೆಲಸಕ್ಕೆ ಬರೋ ಜನಸಾಮಾನ್ಯರಲ್ಲಿ ಬಹುತೇಕರು ಮಧ್ಯಾಹ್ನ ಊಟವನ್ನೇ ಮಾಡೋದಿಲ್ಲ. ಊಟಕ್ಕೆ ಹೋದ್ರೆ ಕ್ಯೂ ಹೋಗುತ್ತೆಂದು ಕೆಲಸ ಮುಗಿಸಿಯೇ ಊಟ ಮಾಡೋದು. ಇಂತಹಾ ಪರಿಸ್ಥಿತಿ ಚಿಕ್ಕಮಗಳೂರಿನ ಆರ್.ಟಿ.ಓ.ಕಚೇರಿಯಲ್ಲಿ ಇಂದಿಗೂ ಜೀವಂತ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ (ಹೆಸರು ಹೇಳಲು ಇಚ್ಛಿಸದವರು) ಸರ್…. ಇಲ್ಲಿನ ಆರ್.ಟಿ.ಓ. ಕಚೇರಿಗೆ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಗಾಡಿ ಇಟ್ಟವರೆಲ್ಲಾ ಸಣ್ಣ ಕೆಲಸಕ್ಕೂ ಇಲ್ಲಿಗೆ ಬರಬೇಕು. ಒಂದು ದಿನ ಒಬ್ಬರು ಬಂದು ಹೋಗಬೇಕೆಂದ್ರೆ ಊಟ-ತಿಂಡಿ, ಬಸ್ ಚಾರ್ಜ್ ಅಂತ ಕನಿಷ್ಠ 500 ರೂಪಾಯಿ ಹಣ ಬೇಕು. ಬಂದರೆ, ಆರ್.ಟಿ.ಓ. ಇರಲ್ಲ. ಇದ್ರು ಊಟಕ್ಕೆ ಹೋದವರು ಬರೋದೆ ಇಲ್ಲ. ಅಧಿಕಾರಿಗಳು ಮಧ್ಯವರ್ತಿಗಳ ಫೈಲ್ ಮೂವ್ ಮಾಡೋದ್ರಲ್ಲಿ ಬ್ಯುಸಿ ಇರುತ್ತಾರೆ. ಜನಸಾಮಾನ್ಯರ ಕಷ್ಟವನ್ನ ಕೇಳೋರೆ ಇಲ್ಲ. ಆರ್.ಟಿ.ಓ. ಅಧಿಕಾರಿ 11 ಗಂಟೆಗೆ ಬರ್ತಾರೆ, ಎರಡು ಗಂಟೆಗೆ ಹೋಗ್ತಾರೆ. ಜೋರಾಗಿ ಮಾತನಾಡಿದ್ರೆ ಅದನ್ನ ತಂಬಾ, ಇದನ್ನ ತಂಬಾ ಅಂತ ಸಂಜೆ ಮಾಡಿ ಮನೆಗೆ ಹೋಗ್ತಾರೆ, ಇಲ್ಲಿ ಜನರ ಕಷ್ಟ ಕೇಳೋರೆ ಇಲ್ಲ ಸರ್ ಎಂದು ಅಳಲು ತೋಡಿಕೊಂಡಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಳಸ ಮೂಲದ ಮಹಿಳೆಯೊಬ್ಬರದ್ದು ಇದೇ ನೋವು. ಮಧ್ಯವರ್ತಿಗಳಿಲ್ಲದೆ ಬಂದಿದ್ದಕ್ಕೆ ಮೂರು ದಿನ ಸತಾಯಿಸಿದ್ದಾರೆ ಸರ್. ಮಧ್ಯಮ ವರ್ಗದ ಕುಟುಂಬ. ಮನೆಯಲ್ಲಿ ಮಕ್ಕಳು ಇರ್ತಾರೆ. ನಾಳೆ ಬಾ, ನಾಡಿದ್ದು ಬಾ ಅಂತಾರೆ. ನಾವು ಬಂದಾಗ ಒಂದೊಂದು ದಿನ ಒಬ್ಬೊಬ್ಬರು ಇರಲ್ಲ. ಇಲ್ಲಿ ಕೆಲಸ ಮಾಡಿಸಿಕೊಳ್ಳೋದು ತುಂಬಾ ಕಷ್ಟ ಸರ್ ಅಂತ ಅವಲತ್ತು ತೋಡಿಕೊಂಡಿದ್ದಾರೆ. ಆದ್ರೆ, ಜನಸಾಮಾನ್ಯರ ಕಷ್ಟ-ನೋವು ಇಲ್ಲಿನ ದಪ್ಪ ಚರ್ಮದ ಅಧಿಕಾರಿಗಳಿಗೆ ಹಾಗೂ ಮುಖವಾಡಧಾರಿಗಳಿಗೆ ಅರ್ಥವೇ ಆಗಲ್ಲ. ಎಲ್ಲರೂ ಕಿತ್ತು ತಿನ್ನೋ ರಣಹದ್ದುಗಳಾಗಿದ್ದಾರೆ.
ಇಲ್ಲಿನ ಕಥೆ ಈಗಿರುವಾಗ ದೂರದ ಕುದುರೆಮುಖ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಿಂದ ಬರುವಂತವರ ವ್ಯಥೆ ಏನಾಗಬೇಡವೆಂದು ನೀವೇ ಯೋಚಿಸಿ. ಬಂದ ಜನ ಆರ್.ಟಿ.ಓ ಎಲ್ಲಿ ಅಂತ ಕೇಳಿದ್ರೆ, ಅವ್ರು ಕಚೇರಿಯಲ್ಲಿದ್ರೆ ಇದ್ದಂತೆ. ಕಚೇರಿಯಲ್ಲಿ ಇಲ್ಲ ಅಂದರೆ ಮುಗೀತು, ಡಿಸಿ ಆಫೀಸ್‍ನಲ್ಲಿ ಮೀಟಿಂಗ್. ಅವರು ಮನೆಯಲ್ಲಿರ್ತಾರೋ, ಹೋಟೆಲ್‍ನಲ್ಲಿ ಇರ್ತಾರೋ ಅಥವ ಮತ್ತಿನ್ನೆಲ್ಲಿ ಇರ್ತಾರೋ ಗೊತ್ತಿಲ್ಲ. ಜನಕ್ಕೆ ಸಿಗೋ ಉತ್ತರ ಮೀಟಿಂಗ್. ತಿಂಗಳಲ್ಲಿ ಡಿಸಿಯವರು ಆರ್.ಟಿ.ಓ. ಜೊತೆ ಎಷ್ಟು ಬಾರಿ ಮೀಟಿಂಗ್ ಮಾಡ್ತಾರೋ ದೇವ್ರೇ ಬಲ್ಲ. ಆರ್.ಟಿ.ಓ. ಕಚೇರಿಯಲ್ಲಿ ಇಲ್ಲ ಅಂದರೆ ಮೀಟಿಂಗ್ ಅಂತಾರೆ ಸಿಬ್ಬಂದಿಗಳು. ಜಿಲ್ಲಾಧಿಕಾರಿ ಇತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.
ಇಲ್ಲಿ ಅಧಿಕಾರಿಗಳು ಇರಲ್ಲ. ಇದ್ದರೂ ನಮ್ಮ ಸಮಯಕ್ಕೆ ಸಿಗಲ್ಲ. ಸಿಕ್ಕರೂ ಕೈಯನ್ನೇ ನೋಡ್ತಿರ್ತಾರೆ ಅಂತಾರೆ ನೊಂದವರು. ದಲ್ಲಾಳಿಗಳಿಗೆ ಅಣ್ಣಾ… ಅಣ್ಣಾ… ಅಂತ ಅವರ ಬೆನ್ನು ಬೀಳೋಕೆ ಕೆಲವರಿಗೆ ಮನಸಾಕ್ಷಿ ಒಪ್ಪಲ್ಲ. ಇಲ್ಲಿ ದೊಡ್ಡವರು-ಸಣ್ಣವರು, ವೃದ್ಧರು-ಹೆಣ್ಮಕ್ಕಳು ಅಂತ ಯಾವ ಸಿಂಪಥಿಯೂ ನಡೆಯಲ್ಲ. 500ರ ಜಾಗದಲ್ಲಿ 1000 ಕೊಟ್ಟರೆ ಅವರೇ ಸರ್… ಸರ್… ಅಂತ ನಿಮ್ಮ ಬೆನ್ನು ಬೀಳ್ತಾರೆ. ಅರ್ಧ ಗಂಟೆ ಕೆಲಸವನ್ನ ಹತ್ತೇ ನಿಮಿಷಕ್ಕೆ ಮುಗಿಸಿ ಗೇಟಿನವರೆಗೂ ಬಂದು ಬೀಳ್ಕೊಡ್ತಾರೆ. ಶ್ರೀಮಂತರು, ಅಧಿಕಾರಸ್ಥರಿಗಷ್ಟೆ ಇಲ್ಲಿ ಬೆಲೆ, ಗೌರವ. ಸಣ್ಣವರು ಲೆಕ್ಕಕ್ಕೇ ಇಲ್ಲ.
ಡಿ.ಎಲ್. ಎಲ್.ಎಲ್.ಆರ್. ದಾಖಲೆಗಳು, ಸ್ಮಾರ್ಟ್ ಕಾರ್ಡ್ ಬೇಕೆಂದು ಬಂದರೆ ಸದ್ಯಕ್ಕೆ ಸಿಗಲ್ಲ ಬಿಡಿ. ಯಾಕಂದರೆ, ಸ್ಮಾರ್ಟ್ ಕಾರ್ಡ್ ಇರಲ್ಲ. ಇದ್ರು ಸೀಮಿತ, ಸ್ಟಾಕ್ ಇರಲ್ಲ. ಕಾರ್ಡ್ ಇದ್ರೆ ರಿಬ್ಬನ್ ಇರಲ್ಲ. ಎಲ್ಲವೂ ಇದ್ದರೆ ಅಧಿಕಾರಿಗಳಿರಲ್ಲ. ಅಧಿಕಾರಿಗಳು ಇದ್ದಾಗ ಆರ್.ಟಿ.ಓ ಇರಲ್ಲ. ಆರ್.ಟಿ.ಓ. ಇದ್ದಾಗ ಎಫ್.ಡಿ.ಎ-ಎಸ್.ಡಿ.ಎ ಇರಲ್ಲ. ಇಲ್ಲಿನ ಸಮಸ್ಯೆ ಹೇಳಲು ಒಂದೋ ಎರಡೋ. ಹೇಳ್ತಾ ಹೋದ್ರೆ ರಾಮಾಯಣ-ಮಹಾಭಾರತದ ಗ್ರಂಥದಂತಾಗುತ್ತೆ. ಇಷ್ಟೆಕ್ಕೆಲ್ಲಾ ಒಂದೇ ಒಂದು ಪರಿಹಾರ. ಆರ್.ಟಿ.ಓ. ಕಚೇರಿಗೆ ಬರೋ ದಲ್ಲಾಳಿಗಳನ್ನ ಗೇಟಿನ ಬಳಿಯೂ ಬಿಟ್ಟಿಕೊಳ್ಳದಿದ್ರೆ ನಾಳೆಯಿಂದಲೇ ಇಲ್ಲಿ ಒಂದೇ ಒಂದು ಸಮಸ್ಯೆ ಇರಲ್ಲ ಅನ್ನೋ ಭಾವನೇ ಕೂಡ ಜನಸಾಮಾನ್ಯರದ್ದೆ. ಆದರೆ, ಅಂತಹಾ ಸುದಿನ ಯಾವಾಗ ಬರುತ್ತೋ ದೇವರೇ ಬಲ್ಲ.










