ಚಿಕ್ಕಮಗಳೂರು : ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವೈಚಾರಿಕತೆ ಮತ್ತು ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಂಡರೆ ದೇಶ ತಾನಾಗೇ ಅಭಿವೃದ್ದಿಯಾಗುತ್ತದೆ ಎಂದು ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಅಮ್ಜದ್ ಹೇಳಿದರು.
ನಗರದ ಬಿಎಸ್ ಪಿ ಕಛೇರಿಯಲ್ಲಿ ಇಂದು ಆಯೋಜಿಸಿದ್ದ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆನಪೇ ರೋಮಾಂಚಕಾರಿಯಾಗಿದೆ. ಒಡೆಯರ್ ಅವರು ಅಭಿವೃದ್ದಿಯ ಹರಿಕಾರರಾಗಿದ್ದರು. ಜನಪರ ಕಾಳಜಿ ಹೊಂದಿದ್ದರು. ಪ್ರಜಾಪ್ರೇಮಿಯಾಗಿದ್ದ ಅವರು ಮೇಲು ಕೀಳು ಎಂಬುದನ್ನು ಬದಿಗೊತ್ತಿ ಎಲ್ಲಾ ವರ್ಗದವರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು.
ನಾಡಿನ ಅಭಿವೃದ್ದಿಗಾಗಿ ಕೈಗಾರಿಕೆ, ಶಿಕ್ಷಣ ಕ್ಷೇತ್ರ, ನೀರಾವರಿ ಯೋಜನೆ ಸೇರಿದಂತೆ ಅವರು ಮಾಡಿರುವ ನೂರಾರು ಕಾರ್ಯಗಳು ಇಂದಿಗೂ ರಾಜ್ಯದಲ್ಲಿ ಎದ್ದು ಕಾಣುತ್ತಿವೆ ಎಂದು ತಿಳಿಸಿದರು.
ಕೊರೊನಾ ಮಹಾಮಾರಿಯ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಬಹುಜನ ಸಮಾಜ ಪಕ್ಷ ಮಹಾತ್ಮರ ಜಯಂತಿ ಆಚರಣೆ ಸೇರಿದಂತೆ ಸಕ್ರಿಯವಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ, ವೈಚಾರಿಕತೆ ಮತ್ತು ಆದರ್ಶಗಳನ್ನು ಇಂದಿನ ಮಕ್ಕಳಿಗೆ ಯುವಜನತೆಗೆ ಮತ್ತು ರಾಜಕಾರಣಿಗಳಿಗೆ ತಿಳಿಸಿ ಹೇಳುವ ಕೆಲಸವಾಗಬೇಕು ಎಂದರು.
ಶೋಷಿತ ವರ್ಗಕ್ಕೆ ಅಂದಿನ ಕಾಲದಲ್ಲೇ ಮೀಸಲಾತಿ ನೀಡಿದ ಮಹಾತ್ಮರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದ ಅವರು ನಾಡಿನ ಅಭಿವೃದ್ದಿ ಮತ್ತು ರೈತರ ಹಿತದೃಷ್ಟಿಯಿಂದ ಕುಟುಂಭದ ಚಿನ್ನವನ್ನು ಮಾರಿ ಕೃಷ್ಣರಾಜ ಸಾಗರ ಜಲಾಶಯವನ್ನು ನಿರ್ಮಿಸಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಜಯಂತಿ ಪ್ರಯುಕ್ತ ಸಾರ್ವಜನಿಕರಿಗೆ ಪಕ್ಷದ ವತಿಯಿಂದ ಸಿಹಿ ವಿತರಿಸಲಾಯಿತು. ಬಿಎಸ್ಪಿ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ಮಿತ್ರ, ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ವಿನೀತ್, ನವೀನ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಉಪಸ್ಥಿತರಿದ್ದರು.










