ಚಿಕ್ಕಮಗಳೂರು : ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿರುವ ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಸ್ಕೂಲ್ ಸಪ್ತಾಹಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಎಳೆಯ ವಯಸ್ಸಿನಿಂದಲೇ ಪ್ರತಿದಿನ ಪ್ರಾಣಾಯಾಮ, ಯೋಗಾಭ್ಯಾಸ, ಸೂರ್ಯ ನಮಸ್ಕಾರ ಮಾಡುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಲು ಸಾಧ್ಯವಾಗುತ್ತದೆ ಎಂದ ಅವರು ಹಾಗಾಗಿ ವಿದ್ಯಾರ್ಥಿಗಳು ಪ್ರತಿದಿನ ಸೊರ್ಯೋದಕ್ಕೆ ಮುಂಚೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಸದಾ ಕ್ರೀಯಾಶೀಲರಾಗಿರಬೇಕು ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಸ್ಕೂಲ್ ಸಪ್ತಾಹವನ್ನು ಜಾರಿಗೆ ತಂದಿದ್ದು, ಅದನ್ನು ಎಲ್ಲಾ ಶಾಲೆಗಳಲ್ಲೂ ತಪ್ಪದೇ ಆಚರಿಸಬೇಕು ಎಂದು ಸೂಚಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ ಶಾಲೆಯಲ್ಲಿ ಏಳು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಯೋಗಾಸನ, ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ಕಲಿಸಲಾಗುವುದು, ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ತಮಿಳು ಶಾಲೆಯ ಮುಖ್ಯ ಶಿಕ್ಷಕಿ ವಾಣಿ, ಶಿಕ್ಷಕರಾದ ಶರವಣ, ನಾಗರಾಜ್ ಉಪಸ್ಥಿತರಿದ್ದರು.
ಶಿಕ್ಷಕರಾದ ಸಾವಿತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು, ನಾಗವೇಣಿ ಸ್ವಾಗತಿಸಿದರು, ಜಯಂತಿ ವಂದಿಸಿದರು.ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಮೂಹಿಕ ಮಂತ್ರ ಪಠಣ, ಸೂರ್ಯ ನಮಸ್ಕಾರ ಜರುಗಿತು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡಬೇಕು...










