ಬೆಂಗಳೂರು: ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಮಾಡಿದ್ದ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅಭಿನವ ಹಾಲಶ್ರೀ ಬಿಡುಗಡೆಯಾಗಿದ್ದಾರೆ.
ಬಿಜೆಪಿ ಎಂಎಲ್ಎ ಸ್ಥಾನಕ್ಕೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಪರಪ್ಪನ ಅಗ್ರಹಾರ ಸೇರಿದ್ದರು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು ಹಾಲಶ್ರೀ ಅವರು ಜೈಲಿನಿಂದ ಹೊರ ಬಂದಿದ್ದು, ಅವರನ್ನು ಪ್ರಮೋದ್ ಮುತಾಲಿಕ್ ಅವರು ಕೇಸರಿ ಶಾಲು ಹಾಕಿ ಸ್ವಾಗತ ಕೋರಿದರು.
ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾಲಶ್ರೀ, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು. ಅದನ್ನು ಪ್ರಕರಣದ ತನಿಖೆ ವೇಳೆ ಪರಿಗಣಿಸಬೇಕು. ಮುಂದೊಂದು ದಿನ ಈ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ನಮ್ಮನ್ನ ನಂಬಿ ಆರಾಧಿಸುವ ಸಮಾಜಕ್ಕೆ ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಮುಂದೆಯೂ ಅದೇ ರೀತಿ ಬದುಕು ಸಾಗಿಸುತ್ತೇನೆ ಎಂದರು.










