ಡಿಕೆಶಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ: ಮಾಜಿ ಸಚಿವೆ ಮೋಟಮ್ಮ

7

ಮೂಡಿಗೆರೆ: ರಾಜ್ಯದ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
 ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ  ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಹಕ್ಕು ಹಾಗೂ ಅವಕಾಶಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
“ನೀವು ವಾಯ್ಸ್ ಜೋರ್ ಮಾಡಬೇಕು ಎಂದು ನಾನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೇಳಿದ್ದೆ. ನಮಗೆ ಅವಕಾಶ ಕೊಡಬೇಕು ಎಂದು ನೀವೆಲ್ಲರೂ ಒಟ್ಟಾಗಿ ಮಾತನಾಡಿ ಎಂದು ಹೇಳಿದ್ದೆ. ನನಗೆ–ನಿನಗೆ ಅನ್ನೋದು ಆಮೇಲೆ. ಮೊದಲು ನಮ್ಮ ಧ್ವನಿ ಗಟ್ಟಿಯಾಗಬೇಕು. ಇಲ್ಲದಿದ್ದರೆ ಯಾರೂ ನಮ್ಮನ್ನು ಕೇರ್ ಮಾಡುವುದಿಲ್ಲ” ಎಂದು ಹೇಳಿದರು.
ಮಹಿಳೆಯರು ಗಟ್ಟಿಯಾಗಿ ಮಾತನಾಡದಿದ್ದರೆ ಸಮಾಜದಲ್ಲಿ ತಮ್ಮನ್ನು ಗುರುತಿಸುವವರೇ ಇರುವುದಿಲ್ಲ. ನಾವು ಗಟ್ಟಿ ಹಾಗೂ ಸಮರ್ಥರು ಎಂಬುದನ್ನು ತೋರಿಸದಿದ್ದರೆ ನಮ್ಮನ್ನು ಮೂಲೆಗೆ ಕೂರಿಸುತ್ತಾರೆ ಎಂದು ಮೋಟಮ್ಮ ಹೇಳಿದರು.
ಮನೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಮಹಿಳೆ ತನ್ನ ನಿಲುವನ್ನು ಗಟ್ಟಿಯಾಗಿ ವ್ಯಕ್ತಪಡಿಸದಿದ್ದರೆ ಅತ್ತೆ, ಮಾವ ಹಾಗೂ ಗಂಡ ಸೇರಿದಂತೆ ಯಾರೂ ಆಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧೈರ್ಯದಿಂದ ಧ್ವನಿ ಎತ್ತಬೇಕು ಎಂದು ಅವರು ಸಲಹೆ ನೀಡಿದರು.