ರಾಮನಗರ : ತುಮಕೂರಿನಲ್ಲಿ ಖಾಸಗಿ ಬಸ್ ಅಪಘಾತದ ಕುರಿತಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಇಂದು ಮೂರು ಕಡೆ ಅವಘಡಗಳಾಗಿವೆ. ತುಮಕೂರಿನ ಪಾವಗಡದಲ್ಲಿ ಕೂಡ ಖಾಸಗಿ ಬಸ್ ಅನಾಹುತವಾಗಿದ್ದು, ಆ್ಯಕ್ಸಿಡೆಂಟ್ ನಲ್ಲಿ ಎಂಟತ್ತು ಮಂದಿ ಸಾವಿಗೀಡಾಗಿದ್ದಾರೆಂಬ ಸುದ್ದಿ ಇದೆ ಎಂದು ಹೇಳಿದರು.
ಬಡವರು ಬಸ್ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕವಾಗಿದ್ದಾರೆ. ಸರ್ಕಾರ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಬೇಕು. ಸಾರಿಗೆ ಸಚಿವರು ಹಾಗೂ ಸರ್ಕಾರ ಮಾಹಿತಿ ಪಡೆಯಬೇಕು. ಕೂಡಲೇ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯವಾಗಬೇಕು. ಪಾವಗಡ ಅತ್ಯಂತ ಬರಗಾಲ ಇರುವ ತಾಲೂಕು. ಬಸ್ ಅವಘಡದಲ್ಲಿ ಕೂಲಿ ನಾಲಿ ಮಾಡುವ ಜನರಿದ್ದರೆ ಹೆಚ್ಚಿನ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರ ನೀಡಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.
ಹಾಗೆಯೇ, ಉಡುಪಿ ಹಾಗೂ ಬಳ್ಳಾರಿಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಲ್ಲೂ ಅವಘಡವಾಗಿದೆ. ಅಲ್ಲಿ ಸ್ಥಳ ಪರಿಶೀಲನೆ ಮಾಡಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಅನಾಹುತದಲ್ಲಿ ನೊಂದವರ ನೆರವಿಗೆ ಮುಂದಾಗಲಿ ಎಂದು ಸರ್ಕಾರಕ್ಕೆ ಹೇಳ ಬಯಸುತ್ತೇನೆ ಅಂತಾ ಹೇಳಿದರು.










