ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್​ನವರು : ಸಚಿವ ಸುಧಾಕರ್.

65
firstsuddi

ಚಿಕ್ಕಬಳ್ಳಾಪುರ : ಇಡೀ ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿದ ಪಿತಾಮಹರೇ ಕಾಂಗ್ರೆಸ್ಸಿಗರು. ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್ ನವರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಮೃತರಾಗಿರುವುದಕ್ಕೆ ದುಃಖವಿದೆ. ಆದರೆ ಈ ಸಾವು ಏಕೆ ಸಂಭವಿಸಿದೆ ಎಂಬುದು ತನಿಖೆ ಆಗದೆ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಕೂಡ ಬೇಕಿಲ್ಲ. ಕಾಂಗ್ರೆಸ್ ನವರು ಯಾವ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ನಾವು ಕೂಡ ಕೊಡಬಹುದು ಎಂದರು.

ಕಾಂಗ್ರೆಸ್ ನವರು ಏನು ಮಾಡುತ್ತಾರೆ ಎಂಬುದು ಈಗ ಮುಖ್ಯವಲ್ಲ. ತನಿಖೆ ನಂತರ ಸತ್ಯ ತಿಳಿದುಬರಲಿದೆ ಹಾಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಹಿಂದೆ ನಡೆದ ಡಿವೈಎಸ್ಪಿ ಗಣಪತಿ ಪ್ರಕರಣವೇ ಬೇರೆ, ಈಗಿನ ವಿಚಾರವೇ ಬೇರೆ. ವಾಟ್ಸಾಪ್ ನಲ್ಲಿ ಬಂದ ಸಂದೇಶ ಅವರಿಂದಲೇ ಬಂದಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ತನಿಖೆ ನಡೆಯುತ್ತಿರುವುದರಿಂದ ಕಾದು ನೋಡಬೇಕಿದೆ. ಸಚಿವ ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ತನಿಖಾ ವರದಿ ಬಂದ ಬಳಿಕ ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೆಂಪಣ್ಣರನ್ನು ತಕ್ಷಣ ವಜಾ ಮಾಡಬೇಕು. ಗುತ್ತಿಗೆದಾರ ಕೆಂಪಣ್ಣರನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಬೇಕು. ಇಂದೇ ಕೆಂಪಣ್ಣ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.