ತಮಿಳಿನ ಹೆಸರಾಂತ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ನಂತರ ತಕ್ಷಣವೇ ಅವರನ್ನು ಐಸಿಯೂಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯಕಾಂತ್ ಅವರನ್ನು ಮಂಗಳವಾರ ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ‘ವಿಜಯ್ ಅವರು ಆರೋಗ್ಯವಾಗಿದ್ದಾರೆ. ಇದೊಂದು ಸಾಮಾನ್ಯ ಪರೀಕ್ಷೆ. ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆ’ ಎಂದು ಡಿಎಂಡಿಕೆ ಪಕ್ಷದವರು ಹೇಳಿದ್ದರು. ಆ ಬಳಿಕ ಅವರಿಗೆ ಕೊವಿಡ್ ಇರುವ ವಿಚಾರ ದೃಢವಾಯಿತು. ಅವರ ಸಾವಿನ ಸುದ್ದಿ ಪಕ್ಷದವರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈ ಮೊದಲು ನವೆಂಬರ್ 20ರಂದು ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು.
ಹಲವಾರು ವರ್ಷಗಳ ಕಾಲ ನಟರಾಗಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿರುವ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳು ಅವರನ್ನೂ ಕಾಡುತ್ತಿದ್ದವು. ರೆಗ್ಯುಲರ್ ತಪಾಸಣೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲೆಯಾಗಿದ್ದಾರೆ ಎಂದು ಹೇಳುವ ಮೂಲಕ ಗೊಂದಲದ ಹೇಳಿಕೆಗಳನ್ನೂ ಪಕ್ಷ ಕೊಟ್ಟಿತ್ತು.
ವಿಜಯಕಾಂತ್ ಅವರು 1952ರಲ್ಲಿ ಮದುರೈನಲ್ಲಿ ಜನಿಸಿದರು. ಅವರು 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2009ರ ಈಚೆಗೆ ಅವರು ಚಿತ್ರರಂಗದಿಂದ ದೂರ ಆಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಪ್ರೇಮಲತಾ ಅವರನ್ನು ವಿಜಯಕಾಂತ್ 1990ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
2005ರಲ್ಲಿ ವಿಜಯಕಾಂತ್ ಅವರು ಡಿಎಂಡಿಕೆಯನ್ನು ಸ್ಥಾಪಿಸಿದರು. ಚೆನ್ನೈನಲ್ಲಿ ಈ ಪಕ್ಷದ ಮುಖ್ಯ ಕಚೇರಿ ಇದೆ. ಆ ಬಳಿಕ ಅವರು ಸಿನಿಮಾ ಕಡೆ ಹೆಚ್ಚು ಒಲವು ತೋರಿಸಲಿಲ್ಲ. ಅವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದರಿಂದ ರಾಜಕೀಯದಲ್ಲೂ ಆ್ಯಕ್ಟೀವ್ ಆಗಿರಲಿಲ್ಲ.










