ನನ್ನ ಮೇಲೆ ಮಾಡಿರುವ ಆರೋಪ ಸಾಬೀತಾಗದಿದ್ರೆ ರೋಹಿಣಿ ಸಿಂಧೂರಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು : ಸಾ.ರಾ.ಮಹೇಶ್.

96
firstsuddi

ಮೈಸೂರು : ರಾಜಕಾಲುವೆ ಮೇಲೆ ಸಾ.ರಾ. ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ನಿರ್ಮಾಣವಾಗಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಂದು ಮೈಸೂರಿನ ಪ್ರಾದೇಶಿಕ ಕಚೇರಿ ಮುಂಭಾಗ ಏಕಾಂಗಿಯಾಗಿ ಧರಣಿ ನಡೆಸುತ್ತಿರುವ ಸಾ.ರಾ. ಮಹೇಶ್ ಅವರು  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜಕಾಲುವೆ ಮೇಲೆ ಸಾರಾ ಕಲ್ಯಾಣ ಮಂಟಪ ನಿರ್ಮಾಣ ಆಗಿಲ್ಲ. ಉನ್ನತ ಅಧಿಕಾರಿಗಳು ತನಿಖೆ ಮಾಡಲಿ, ನಿಯಮ ಉಲ್ಲಂಘಿಸಿ ನಾನು ಕಲ್ಯಾಣ ಮಂಟಪ ಕಟ್ಟಿಸಿರುವುದು ಸಾಬೀತಾದರೆ ತಕ್ಷಣವೇ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಅಲ್ಲದೇ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದರು.

ಒಂದು ವೇಳೆ ಕಲ್ಯಾಣ ಮಂಟಪ ಕಟ್ಟಿಸಿದ್ದು ಅಕ್ರಮವಲ್ಲ ಎಂದು ಸಾಬೀತಾದರೆ ರೋಹಿಣಿ ಸಿಂಧೂರಿಯವರು ತಕ್ಷಣವೇ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಅವರ ಊರಾದ ಆಂಧ್ರಕ್ಕೇ ಹೋಗಿ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡು ಇರಬೇಕು ಎಂದು ಸಾ. ರಾ. ಮಹೇಶ್ ಕಿಡಿ ಕಾರಿದರು.

ಜಿಲ್ಲೆಯ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ರಾಜಕಾಲುವೆ ಒತ್ತುವರಿ ಬಗ್ಗೆ ತನಿಖೆ ನಡೆಸಿ ಸೋಮವಾರ ವರದಿ ಸಲ್ಲಿಸುವುದಾಗಿ ಹೇಳಿರುವ ಹಿನ್ನಲೆಯಲ್ಲಿ ಸಾ .ರಾ. ಮಹೇಶ್ ಅವರು ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.