ತುಮಕೂರು : ಮಚ್ಚಿನಿಂದ ಪತ್ನಿಯ ಕಾಲು ಕತ್ತರಿಸಿದ ಗಂಡ ಬಳಿಕ ತಾನೂ ಕೂಡ ಚೂರಿಯಿಂದ ಇರಿದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಬಾಬು ಎಂಬಾತ ತನ್ನ ಪತ್ನಿ ಅನಿತಾಳ ಕಾಲನ್ನು ಕತ್ತರಿಸಿ ಹಾಕಿದ್ದಾನೆ. ದಂಪತಿ ನಡುವೆ ಪದೇ ಪದೇ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಗರದ ಅಶೋಕ ಲಾಡ್ಜ್ ಗೆ ಇಬ್ಬರೂ ಬಂದಿದ್ದರು. ಈ ವೇಳೆ ಅನಿತಾಳ ಕಾಲು ಕತ್ತರಿಸಿ, ಬಳಿಕ ತಾನೂ ಕೂಡ ಹೊಟ್ಟೆಗೆ ಚೂರಿಯಿಂದ ಇರಿದುಕೊಂಡಿದ್ದಾನೆ. ನಂತರ ಹೋಟೆಲ್ ಮಾಲೀಕರಿಗೆ ಕರೆ ಮಾಡಿ, ಹೆಂಡತಿಯ ಕಾಲು ಕತ್ತರಿಸಿದ್ದೇನೆ, ಆಸ್ಪತ್ರೆಗೆ ಸೇರಿಸಬೇಕು ನಾಲ್ವರು ಹುಡುಗರನ್ನು ಕಳುಹಿಸಿ ಎಂದು ತಿಳಿಸಿದ್ದಾನೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಬಾಬುವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










