ಪರಿಶಿಷ್ಟರ ಮೇಲೆ ಲಾಠಿ ಪ್ರಹಾರ – ರಾಜ್ಯ ಸರ್ಕಾರ ವಜಾಗೊಳಿಸುವಂತೆ ಬಿಎಸ್‍ಪಿ ಒತ್ತಾಯ…

80
firstsuddi

ಚಿಕ್ಕಮಗಳೂರು : ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದ್ದ ಪರಿಶಿಷ್ಟರ ಮೇಲೆ ಲಾಠಿ ಪ್ರಹಾರ ನಡೆಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಬಹುಜನ ಸಮಾಜ ಪಕ್ಷ ರಾಷ್ಟ್ರಪತಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಲಾಠಿ ಪ್ರಹಾರ ನಡೆಸಿದ ಪೋಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಡಿ.28 ರಂದು ಹರಿಹರದಲ್ಲಿರುವ ಪ್ರೊ|| ಬಿ.ಕೃಷ್ಣಪ್ಪ ಅವರ ಸಮಾಧಿ ಬಳಿಯಿಂದ ಕಾಲ್ನಡಿಗೆಯಲ್ಲಿ ಹೊರಟ ಸಾವಿರಾರು ಪರಿಶಿಷ್ಟರು ನಿನ್ನೆ ಬೆಂಗಳೂರನ್ನು ತಲುಪಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು ಎಂದು ಹೇಳಿದರು.

ಈ ವೇಳೆ ಪೋಲೀಸರು ಲಾಠಿ ಪ್ರಹಾರ ನಡೆಸಿ ಸಾವಿರಾರು ಪರಿಶಿಷ್ಟರನ್ನು ಅಮಾನುಷವಾಗಿ ಥಳಿಸಿದ್ದಾರೆ. ಇದರಿಂದ ಅನೇಕರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದರು.

ಬಹುಸಂಖ್ಯಾತ ಪರಿಶಿಷ್ಟರ ಮನವಿ ಸ್ವೀಕರಿಸಿ ಅವರ ಆಹವಾಲನ್ನು ಆಲಿಸಲು ಸ್ಥಳಕ್ಕಾಗಮಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಪಿ.ಪರಮೇಶ್ವರ್, ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ವಸಂತಕುಮಾರ್, ವಿನೀತ್, ನವೀನ್, ಹುಣಸೇಮಕ್ಕಿ ಲಕ್ಷ್ಮಣ್, ಪುಟ್ಟಸ್ವಾಮಿ ಹಾಜರಿದ್ದರು.