ಮಕ್ಕಳು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು : ಬೇಬಿ ಬಾಯಿ.

97
firstsuddi

ಚಿಕ್ಕಮಗಳೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಇಂದು ನಡೆದ ವಿನೂತನ ರಸಪ್ರಶ್ನೆ ಸ್ಪರ್ಧೆ ಗ್ರಾಮೀಣ ಜನರ ಗಮನ ಸೆಳೆಯಿತು.

ಬೆಳಿಗ್ಗೆ ಗೆಂಡೇಹಳ್ಳಿಯಿಂದ ಕೆ.ಆರ್.ಪೇಟೆ ಮಾರ್ಗವಾಗಿ ನಗರಕ್ಕಾಗಮಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸನ್ನೇರಿದ ಪ್ರತಿಷ್ಠಾನದ ಪದಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ತೆರಳುತಿದ್ದ ವಿದ್ಯಾರ್ಥಿಗಳು ಮತ್ತು ನಗರಕ್ಕಾಗಮಿಸುತ್ತಿದ್ದ ಸಾರ್ವಜನಿಕರ ಮುಂದೆ ನಾಡು ನುಡಿ ಕುರಿತ ಪ್ರಶ್ನೆಗಳನ್ನಿಟ್ಟರು.

ಪ್ರಯಾಣದ ವೇಳೆ ಧಿಡೀರನೇ ಎದುರಾದ ಪ್ರಶ್ನೆಗಳಿಂದ ತಬ್ಬಿಬಾದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೊಸ ಪ್ರಯತ್ನಕ್ಕೆ ಸ್ಪಂದಿಸಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸಿದರು.

ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ವಿಜೇತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕಿ ಎಂ.ಬೇಬಿ ಬಾಯಿ ಬಹುಮಾನ ವಿತರಿಸಿದರು.

ಈ ವೇಳೆ ಮಾತನಾಡಿದ ಬೇಬಿ ಬಾಯಿ ಇದೊಂದು ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮವಾಗಿದ್ದು ನಾಡು ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು.

ಮಕ್ಕಳು ಜ್ಞಾನವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ನಾಡು ನುಡಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಆನಂದ್ ಹಾಜರಿದ್ದರು.