ಮೂಡಿಗೆರೆ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಬೀಳುವ ಸ್ಥಿತಿಯನ್ನು ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳಬೇಕಾಗಿದೆ ಅದೇ ಭಯದಲ್ಲಿ ಶಿಕ್ಷಕರು ಪಾಠ ಮಾಡಬೇಕಾದ ದುರ್ಗತಿ ತಾಲ್ಲೂಕಿನ ಬಿದರಹಳ್ಳಿ ಶಾಲೆಯಲ್ಲಿ ಕಂಡು ಬಂದಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಗೆ ಸದರಿ ಶಾಲೆಯ 4 ನೇ ತರಗತಿ ಮತ್ತು ಅನ್ನದಾಸೋಹದ ಕಟ್ಟಡ ಭಾಗೂಷಹ ಕುಸಿದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನಲಿ-ಕಲಿ ಕಟ್ಟಡವು ಅಪಾಯದ ಅಂಚನ್ನು ತಲುಪಿದೆ. 1 ರಿಂದ 7 ನೇ ತರಗತಿ ಇರುವ ಈ ಶಾಲೆಯಲ್ಲಿ 74 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಾಲ್ಕನೇ ತರಗತಿ ಕಟ್ಟಡ ಕುಸಿದ ಹಿನ್ನಲೆಯಲ್ಲಿ ಮುಖ್ಯ ಶಿಕ್ಷಕರ ಕೊಠಡಿಯ ಪಕ್ಕದಲ್ಲಿ 1 ಮತ್ತು ನಾಲ್ಕನೇ ತರಗತಿಗಳ ವಿದ್ಯಾರ್ಥಿಗಳನ್ನು ಒಟ್ಟಾಗಿ ಕೂರಿಸಿ ಪಾಠ ಮಾಡುತ್ತಿದ್ದಾರೆ. ಆದರೆ ಈಗ ಪಾಠ ಕೇಳುವ ವಿದ್ಯಾರ್ಥಿಗಳು ಇರುವ ಕಟ್ಟಡದ ಪಕಾಸುಗಳು ತುಂಡಾಗಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಹಂತವನ್ನು ತಲುಪಿದೆ. ಮುಖ್ಯ ಶಿಕ್ಷಕರ ಕೊಠಡಿಯು ಸಹ ಇದೇ ಪರಿಸ್ಥಿತಯನ್ನು ತಲುಪಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆಗಳು ಇದೆ.
ಈ ಬಗ್ಗೆ ಎಸ್ಡಿಎಂಸಿ ಅಧ್ಯಕ್ಷ ಜಯಪಾಲ್ ಅವರನ್ನು ಪರ್ತಕರ್ತರು ವಿಚಾರಿಸಿದಾಗ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ಅಧಿಕಾರಿಗಳು ಭೇಟಿ ಮಾಡಿದ್ದು, ದುರಸ್ಥಿ ಪಡಿಸುವ ಭರವಸೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ ಎಂದರು.
ಗ್ರಾ.ಪಂ.ಸದಸ್ಯ ಲಿಯಾಖತ್ ಆಲಿ ಮಾತನಾಡುತ್ತಾ ನೂತನ ಗ್ರಾಮಪಂಚಾಯಿತ್ ಕಟ್ಟಡದ ಸಮೀಪ ಸರ್ಕಾರಿ ಶಾಲೆಯಿದ್ದು, ಅದು ಸೋರುತ್ತಿದ್ದು, ಅದಕ್ಕೆ ಮೇಲ್ಛಾವಣಿ ನಿರ್ಮಿಸಿ ಸುತ್ತ ಗೋಡೆ ಕಟ್ಟಿ ಶಾಲೆಯನ್ನು ವರ್ಗಾಯಿಸಿದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವಭಯದಿಂದ ದೂರವಿರಲು ಸಾಧ್ಯ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಸಮಿನಾತಾಜ್ ಮಾತನಾಡುತ್ತಾ, ಸರ್ಕಾರ ವಿಳಂಬ ಮಾಡದೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತದೃಷ್ಠಿಯಿಂದ ಕಟ್ಟಡ ನಿರ್ಮಿಸಲು ತಕ್ಷಣವೇ ಅನುಧಾನ ಬಿಡುಗಡೆ ಮಾಡುವಂತೆ ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಸರ್ಕಾರವನ್ನು ಒತ್ತಾಯಿಸಿರುವುದಾಗಿ ಈಬಗ್ಗೆ ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಎಸ್ಡಿಎಂಸಿ ಸದಸ್ಯ ಲಕ್ಷ್ಮಣ್, ಗ್ರಾಮಸ್ಥರಾದ ಮನ್ಸೂರ್ ಹುಸೇನ್, ಯೋಗೇಶ್, ಗಿರೀಶ್ ಅವರು ಕಟ್ಟಡ ನಿರ್ಮಾಣವಾಗುವವರೆಗೂ ಶಾಲಾ ವಿದ್ಯಾರ್ಥಿಗಳಿಗೆ ನೂತನ ಗ್ರಾಮಪಂಚಾಯಿತಿ ಕಟ್ಟಡದ ಸಮೀಪ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಮಾಡುವಂತೆ ಮುಖ್ಯ ಶಿಕ್ಷಕಿ ನಾಗರತ್ನ ಎಂ.ಜಿ.ಅವರನ್ನು ಒತ್ತಾಯಿಸಿದರು.
ಮುಖ್ಯ ಶಿಕ್ಷಕಿ ನಾಗರತ್ನ ಎಂ.ಜಿ.ಯವರು ಶಿಕ್ಷಣಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ: ಕುಸಿಯುವ ಹಂತದಲ್ಲಿ ಸ.ಹಿ.ಪ್ರಾ ಶಾಲೆ, ಜೀವ ಭಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು…










