ಮೂಡಿಗೆರೆ : ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ, ಕಡಿದಾಳ್ ಗ್ರಾಮದಲ್ಲಿ ಕಾಫಿ ತೋಟಕ್ಕೆ ಬೆಂಕಿ, ಗ್ರಾಮಸ್ಥರ ಆಕ್ರೋಶ…

641
firstsuddi

ಮೂಡಿಗೆರೆ: ತಾಲ್ಲೂಕಿನ ಆದರ್ಶ ಗ್ರಾಮವೆನಿಸಿಕೊಂಡಿರುವ ದಾರದಹಳ್ಳಿಯ ಕಡಿದಾಳ್ ನಲ್ಲಿ ಮೆಸ್ಕಾಂನವರ ನಿರ್ಲಕ್ಷ್ಯದಿಂದ ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ಕಂಬದ ತಂತಿ ತೋಟದ ಮರಗಳಿಗೆ ತಗಲಿ ರಘುಪತಿ ಆಚಾರ್ ರವರ ತೋಟಕ್ಕೆ ಬೆಂಕಿ ಹತ್ತಿದ ಕಾರಣ ಇಲ್ಲಿನ ತೋಟವೊಂದರಲ್ಲಿ ಸುಮಾರು  50ಕ್ಕೂ ಹೆಚ್ಚು ಕಾಫಿ ಗಿಡಗಳು ಸುಟ್ಟು ಹೋಗಿದ್ದು, ಬಹುದೊಡ್ಡ ಅಪಾಯದಿಂದ ಗ್ರಾಮಸ್ಥರು ಪಾರಾದ ಘಟನೆ ನಡೆದಿದೆ.
ದಾರದಹಳ್ಳಿ ಗ್ರಾಮ ಪಂಚಾಯಿತಿಯು ಆದರ್ಶ ಗ್ರಾಮವೆನಿಸಿಕೊಂಡರು ಗ್ರಾಮದ ಅಭಿವೃದ್ದಿ ಮಾತ್ರ ಶೂನ್ಯ ಎಂದರೆ ತಪ್ಪಾಗಲಾರದು. ಅದಕ್ಕೆ ಉದಾಹರಣೆ ಎಂಬಂತ ಇಲ್ಲಿಗೆ ಅಳವಡಿಸಿರುವ ವಿದ್ಯುತ್ ಕಂಬವು ಅವೈಜ್ಞಾನಿಕದಿಂದ ಎಲ್ಲಿ ಬೇಕೋ ಅಲ್ಲಲ್ಲಿ ಅಳವಡಿಸಿ ಅಪಾಯಕ್ಕೆ ಅಡಿಪಾಯ ಆಕಿದಂತಿದೆ. ಇದರ ಬಗ್ಗೆ ಮಾಹಿತಿ ಇದ್ದರೂ ಇರದಂತೆ ಸುಮ್ಮನೆ ಕಾಲ ಕಳೆಯುತ್ತಿದ್ದಾರೆ ಇಲ್ಲಿನ ಮೆಸ್ಕಾಂನ ಅಧಿಕಾರಿಗಳು. ದಿನದಲ್ಲಿ 3 ಗಂಟೆ ವಿದ್ಯುತ್ ಇದ್ದರೆ ಅದೇ ಹೆಚ್ಚು. ಅಧಿಕಾರಿಗಳಿಗೆ ಕೇಳಿದರೆ ಲೋಡ್ ಶೆಡ್ಡಿಂಗ್ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಇನ್ನೂ ಮೂಡಿಗೆರೆ ಜೂನಿಯರ್ ಇಂಜಿನಿಯರ್ ಮೊಬೈಲ್ ಫೋನ್ ಯಾವಾಗಲೂ ಸ್ವಿಚ್ ಆಫ್ ಆಗಿರುತ್ತದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇಲ್ಲಿನ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ಕಂಬದ ತಂತಿ ತುಂಡರಿಸಿ ತೋಟದಲ್ಲಿ ಸುಮಾರು 15 ದಿನಗಳಿಂದ ತಂತಿಯು ನೇತಾಡುತ್ತಿದ್ದು, ಇದರ ಬಗ್ಗೆ ದುರಸ್ಥಿಪಡಿಸಲು ಸಂಬಂಧಪಟ್ಟ ಮೆಸ್ಕಾಂನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅದಕ್ಕೆ ಅವರು ಪೂರಕವಾಗಿ ಕೂಡಲೇ ಸ್ಪಂದಿಸಿದ್ದರೇ ಇಂತಹ ಅಪಘಾತವಾಗುತ್ತಿರಲಿಲ್ಲ. ಕೇವಲ ನಾಮಕಾವಸ್ಥೆಗೆ ಆದರ್ಶ ಗ್ರಾಮವೆನೆಸಿಕೊಂಡಿರುವ ದಾರದಹಳ್ಳಿ ಪಂಚಾಯತಿಯ ಕೊಣಗೆರೆಯಲ್ಲಿ ಸುಮಾರು 30 ವರುಷದಿಂದಲೂ ವಿದ್ಯುತ್ ವ್ಯವಸ್ಥೆ ಸರಿಯಾಗಿ ಇಲ್ಲದೇ ಕುಡಿಯುವ ನೀರಿಗಾಗಿ ಇಲ್ಲಿನ ಜನರು ಕಷ್ಟಪಡುತ್ತಿದ್ದು, ಇದರ ಬಗ್ಗೆಯೂ ಕೂಡ ಮೆಸ್ಕಾಂನವರಿಗೆ ಹಲವು ಭಾರಿ ಮನವಿಯನ್ನು ಮಾಡಿದ್ದಾದರೂ ಏನು ಪ್ರಯೋಜನವಾಗಲಿಲ್ಲ ಎಂದು ಇಲ್ಲಿನ ಗ್ರಾಮಸ್ಥರಾದ ಹಾಗೂ ಕಿಸಾನ್ ಕಾಂಗ್ರೇಸ್ ಚಿಕ್ಕಮಗಳೂರು ಜಿಲ್ಲಾ ಕಾರ್ಯಧ್ಯಕ್ಷರು ಆದಂತಹ ಬ್ರಿಜೇಶ್ ಕಡಿದಾಳ್ ಫಸ್ಟ್ ಸುದ್ದಿಗೆ ಮಾಹಿತಿಯನ್ನು ನೀಡಿದರು.
ಇತ್ತೀಚಿಗೆ ಇಲ್ಲಿನ ಪಕ್ಕದ ಕೂವೆ ಗ್ರಾಮದಲ್ಲಿ ಮೆಸ್ಕಾಂನ ಸಿಬ್ಬಂದಿಗಳು ಕಾರ್ಯಪವೃತಿಯಲ್ಲಿರುವಾಗ ಇಲ್ಲಿನ ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೇ ವಿದ್ಯುತ್ ಲೈನ್ ಚಾರ್ಜ್ ಮಾಡಿದ್ದು, ಆ ಸಂದರ್ಭ ವಿದ್ಯುತ್ ಕಂಬದ ಮೇಲೆ ಹತ್ತಿ ಲೈನ್ ಸರಿಪಡಿಸುತ್ತಿದ್ದ ಸಿಬ್ಬಂದಿಯು ತನ್ನ ಜೀವ ಕಳೆದು ಕೊಂಡ ಘಟನೆ ಮಾಸುವಾಗಲೇ ಕೂದಲೆಳೆ ಅಂತರದಿಂದ ಇಲ್ಲಿ ಸಂಭವಿಸಿದ ವಿದ್ಯತ್ ಅಪಘಾತದಿಂದ ಗ್ರಾಮಸ್ಥರು ಪಾರಾಗಿದ್ದಾರೆ.ನಿನ್ನೆ ರಾತ್ರಿ ಕಡಿದಾಳ್ ನಲ್ಲಿರುವ ಸುಮಾರು ಮೂರು ವಿದ್ಯುತ್ ಪರಿವರ್ತಕದಲ್ಲಿ ಏಕಕಾಲಕ್ಕೆ ಸ್ಪೋಟಕದ ಶಬ್ದ ಬಂದಿದ್ದು, ಅದೇ ಸಮಯದಲ್ಲಿ ಇಲ್ಲಿನ ತೋಟದಲ್ಲಿ ತುಂಡಾಗಿ ನೇತಾಡುತ್ತಿದ್ದ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು ತೋಟದ ಉದ್ದಕ್ಕೂ ಅಳವಡಿಸಿದ್ದ ಕಂಬದ ಅಡಿಯಲ್ಲಿ ತೋಟವು ಸುಟ್ಟು ಕರಕಲಾಗಿರುತ್ತದೆ. ಆದರೇ ಇದು ಮೆಸ್ಕಾಂನವರ ನಿರ್ಲಕ್ಷ್ಯದಿಂದ ಸಂಭವಿಸಿದ್ದು, ತೋಟಗಳಿಗೆ ಆದ ನಷ್ಟವನ್ನು ಮೆಸ್ಕಾಂನವರೇ ಬರಿಸಿಕೊಡಬೇಕೆಂದು ತೋಟದ ಮಾಲಿಕರಾದ ರಘುಪತಿ ಮೆಸ್ಕಾಂನವರಿಗೆ ಮನವಿಯನ್ನು ಮಾಡಿರುತ್ತಾರೆ.
ಮಲೆನಾಡಿನ ಭಾಗಗಳಲ್ಲಿ ಗುಡ್ಡಗಾಡಿನಿಂದ ಕೂಡಿದ ತೋಟಗಳ ಮದ್ಯದಲ್ಲೆ ವಿದ್ಯುತ್ ಲೈನ್ ಅಳವಡಿಸಿದ್ದರೂ ಅದರ ನಿರ್ವಹಣೆ ಇಲ್ಲಿನ ಮೆಸ್ಕಾಂನವರದ್ದಾಗಿದೆ. ಅಪಘಾತವಾದಗ ಹೆಚ್ಚೆತ್ತುಕೊಳ್ಳುವ ಬದಲು ಅಪಘಾತಕ್ಕಿಂತ ಮೊದಲೆ ಹೆಚ್ಚೆತ್ತುಕೊಂಡರೇ ಮುಂದಾಗಬಹುದಾದ ಅಪಾಯವನ್ನು ತಡೆಯಬಹುದು. ಈ ಮೊದಲು ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರದ ಸಹಬಾಗಿತ್ವದಲ್ಲಿ ಐ.ಪಿ.ಟಿ.ಸಿ.ಎಲ್. ವಿದ್ಯುತ್ ಕಾಮಗಾರಿಯೂ ಅತಿವೇಗದಿಂದ ನಡೆಯುತ್ತಿದ್ದು, ಕಾಮಗಾರಿಯ ವೇಗಕ್ಕೆ ಕಳಪೇ ಮಟ್ಟದ ಕಾಮಗಾರಿ ನಡೆಸುತ್ತಿದ್ದು, ವಾಲಿದ ರೀತಿಯಲ್ಲಿ ಕಂಬವನ್ನು ಅಳವಡಿಸುವುದು ವಿದ್ಯುತ್ ಪರಿವರ್ತಕದ ಕಟ್ಟೆಯು ಈಗಾಗಲೇ ಬಿರುಕು ಬಿಟ್ಟ ಕುರಿತು ಫಸ್ಟ್ ಸುದ್ದಿಯಲ್ಲಿ ಸುದ್ದಿ ಪ್ರಕಟಗೊಂಡಿದ್ದು, ಆಗಾಗ್ಗೆ ಮೆಸ್ಕಾಂನವರನ್ನು ಎಚ್ಚರಿಸುತ್ತಿದ್ದರೂ ಇದ್ಯಾವುದಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳಿಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮದ್ಯ ಪ್ರವೇಶಿಸಿ ಇಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುತ್ತದೆ.