ಬೆಂಗಳೂರು : ಮೇಕೆದಾಟು ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ವಿಚಾರದಲ್ಲಿ ಪ್ರಧಾನಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ. ಸ್ಟಾಲಿನ್ ಪತ್ರ ಒಕ್ಕೂಟದ ವ್ಯವಸ್ಥೆಗೆ ವಿರೋಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದರು.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ನೀರಿನ ಹಕ್ಕಿನ ಮೇಲೆ ನಾವು ಈ ಯೋಜನೆಯನ್ನ ಮಾಡಿಲ್ಲ. ನಮ್ಮ ಪಾಲಿನ ನೀರಿನ ಹಕ್ಕಿನ ಅಡಿ ನಾವು ಮೇಕೆದಾಟು ಮಾಡುತ್ತಿದ್ದೇವೆ, ನಮ್ಮ ರಾಜ್ಯದಲ್ಲಿಯೇ ಮಾಡುತ್ತಿದ್ದೇವೆ ಮತ್ತು ಈಗಾಗಲೇ ಸಾಕಷ್ಟು ಪ್ರಕ್ರಿಯೆ ಮುಗಿದು ಅಂತಿಮ ಹಂತಕ್ಕೆ ಬಂದಿದೆ. 15 ಸಭೆಗಳು ನಡೆದಿವೆ. ಇಲ್ಲಿಯವರೆಗೂ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈಗ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದರು.
ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಯಾವಾಗಲೂ ರಾಜಕೀಯ ಸ್ಟಂಟ್ ಮಾಡುತ್ತಾರೆ. ಇದು ಕೂಡ ಅದರ ಒಂದು ಭಾಗವೇ ಆಗಿದೆ. ಹಾಗಾಗಿ ಅವರ ಬೇಡಿಕೆ ಕಾನೂನು ಬಾಹಿರ, ನಮ್ಮ ನೀರಿನ ಹಕ್ಕಿನ ಮೇಲೆ ಅವರು ದಬ್ಬಾಳಿಕೆ ಮಾಡುವ ಹುನ್ನಾರ ನಡೆಸಿದ್ದು, ಅವರ ಬೇಡಿಕೆಯನ್ನು ಕೇಂದ್ರ ಪರಿಗಣಿಸಬಾರದು. ನಮಗೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.










