ಮೈತ್ರಿ ಸರ್ಕಾರ ಪತನವಾಗಲು ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಅವರೇ ಕಾರಣ : ಸಿದ್ದರಾಮಯ್ಯ.

252
firstsuddi

ಬೆಂಗಳೂರು : ಸುದ್ದಿಗೋಷ್ಟಿ ನಡೆಸಿ ಮಾತನಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್.ಡಿ. ದೇವೇಗೌಡ ಅವರ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚೆಗೆ ದೇವೇಗೌಡ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಅದು ಇತರ ಮಾಧ್ಯಮದಲ್ಲೂ ಕೂಡಾ ಪ್ರಚಾರವಾಗಿದೆ. ನಾನು ಅದರ ಬಗ್ಗೆ ಪ್ರತಿಕ್ರಯಿಸಬಾರದು ಎಂದು ಸುಮ್ಮನಿದ್ದೆ. ಆದರೆ ಅವರು ಗಂಭೀರ ಸ್ವರೂಪವಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಈ ವೇಳೆ ನಾನು ಮೌನವಾಗಿದ್ದರೆ ಜನರಲ್ಲಿ ನನ್ನ ಮೇಲೆ ಬೇರೆ ಅರ್ಥ ಬರಬಹುದು. ಹೀಗಾಗಿ ನಾನು ಇಂದು ಪ್ರತಿಕ್ರಯಿಸುತ್ತಿದ್ದೇನೆ.
ಹೆಚ್.ಡಿ. ದೇವೇಗೌಡ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು, ಅವರು ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ನನಗೂ ಅವರಿಗೂ ರಾಜಕೀಯ ವೈರತ್ವ ಇದೆ ಎಂದು ಅವರೇ ತಿಳಿಸಿದ್ದಾರೆ. ಆದರೆ ನಾನು ಎಂದಿಗೂ ಆ ರೀತಿ ಭಾವಿಸಿಲ್ಲ. ನನಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದೆಂಬ ಮನೋಭಾವನೆ ಇತ್ತು. ಹೀಗಾಗಿ ನಾನು ನಮ್ಮ ಹೈ ಕಮಾಂಡ್ ತೀರ್ಮಾನವನ್ನು ಒಪ್ಪಿಕೊಂಡು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡೆ. ಅದರಂತೆ ನಾನು 14 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಮೈತ್ರಿ ಸರ್ಕಾರ ಪತನವಾಗಲು ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಅವರೇ ಕಾರಣ ಎಂದು ಎಲ್ಲಾ ಶಾಸಕರು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಶಾಸಕರ ಕೆಲಸಗಳನ್ನು ಮಾಡಿಕೊಟ್ಟಿದ್ದರೆ ಶಾಸಕರು ಅತೃಪ್ತರಾಗುತ್ತಿರಲಿಲ್ಲ. ಯಾವಾ ಶಾಸಕರು ಕೂಡಾ ಅಸಮಾಧಾನಗೊಳ್ಳುತ್ತಿರಲಿಲ್ಲ. ಇದೇ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣ.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನನ್ನನ್ನು ಸಮನ್ವಯ ಸಮಿತಿಯ ಅಧ್ಯಕ್ಷ ಮಾಡಿದರು. ನಾವು 5-6 ಬಾರಿ ಸಮನ್ವಯ ಸಮಿತಿಯ ಸಭೆಯನ್ನು ಮಾಡಿದ್ದೆವು. ಆದರೆ ಸಮನ್ವಯ ಸಮಿತಿಯ ಯಾವ ತೀರ್ಮಾನವನ್ನು ಜಾರಿ ಮಾಡಲಿಲ್ಲ. ಸಭೆಯಲ್ಲಿ ಜಾರಿ ಮಾಡುವುದಾಗಿ ಒಪ್ಪುಕೊಳ್ಳುತ್ತಿದ್ದರೂ ಆದರೆ ಯಾವುದೇ ನಿರ್ಧಾರವನ್ನು ಜಾರಿ ಮಾಡಲಿಲ್ಲ. ಈ ವಿಚಾರವನ್ನು ನಾನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ನಾನು ಮಾಡುವವನಲ್ಲ. ಅದೇನಿದ್ದರು ದೇವೇಗೌಡರು ಹಾಗೂ ಅವರ ಮಕ್ಕಳ ಹುಟ್ಟುಗುಣ ಎಂದರು.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಒಟ್ಟಾಗಿ, ಜಾತ್ಯಾತೀತವಾಗಿ ಹೋರಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಐಟಿ, ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದಾರೆ ಎಂದರು.